ಕಡೆಗೂ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ವ್ಯಾಪ್ತಿ! ಕೇರಳಂ ಮಾತಿಗೆ ಕಿಮ್ಮತ್ತು ಕೊಡದ ಕೇಂದ್ರ ಸರ್ಕಾರ 
ರಾಜ್ಯ

ಕೊನೆಗೂ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ವ್ಯಾಪ್ತಿ! ಕೇರಳಂ ಮಾತಿಗೆ ಕಿಮ್ಮತ್ತು ಕೊಡದ ಕೇಂದ್ರ ಸರ್ಕಾರ | Mangaluru Railway

ಪ್ರಮುಖ ಮುಖ್ಯಾಂಶಗಳು

  • ಕೊನೆಗೂ ಮಂಗಳೂರಿನ ದಶಕಗಳ ರೈಲ್ವೆ ಗೊಂದಲಕ್ಕೆ ಬಿತ್ತು ತೆರೆ
  • ಕೇರಳಂ ಸರ್ಕಾರದ ಯಾವ ಮಾತಿಗೂ ಕಿಮ್ಮತ್ತು ಕೊಡದ ಕೇಂದ್ರ
  • ವಿರೋಧಕ್ಕೆ ಸೆಡ್ಡು, ಮಂಗಳೂರು ರೈಲು ನಿಲ್ದಾಣಗಳ ಮೇಲೆ ಕರ್ನಾಟಕ ಮೇಲುಗೈ
  • ಮಂಗಳೂರಿನ ರೈಲ್ವೆ ವಿಭಾಗಗಳು ಈಗ ಮೈಸೂರು ವಿಭಾಗಕ್ಕೆ ಹಸ್ತಾಂತರ
ದಕ್ಷಿಣ ಕನ್ನಡ: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಗಳೂರು ರೈಲ್ವೆ ವಲಯದ ಆಡಳಿತಾತ್ಮಕ ಗೊಂದಲಕ್ಕೆ ಇದೀಗ ಕೊನೆಗೂ ತೆರೆಬಿದ್ದಿದೆ (Mangaluru Railway). ಇಲ್ಲಿಯವರೆಗೆ, ಕೇರಳದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ನಿಲ್ದಾಣಗಳನ್ನು ಈಗ ಕರ್ನಾಟಕದ ಮೈಸೂರು ರೈಲ್ವೆ ವಿಭಾಗಕ್ಕೆ ಹಸ್ತಾಂತರಿಸಲು ಕೇಂದ್ರ ರೈಲ್ವೆ ಸಚಿವಾಲಯ ಸಮ್ಮತಿಸಿದೆ.

ಕೇರಳಕ್ಕೆ ಶಾಕ್, ದಕ್ಷಿಣ ಕನ್ನಡಕ್ಕೆ ಜಯ

'ಮಾತೃಭೂಮಿ' ವರದಿ ಪ್ರಕಾರ, ಕೇರಳದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ರೈಲ್ವೆ ಇಲಾಖೆಯ ನಡೆಯನ್ನು ಕೇರಳಂ ತೀವ್ರವಾಗಿ ಖಂಡಿಸಿದ್ದು, ಇದರಿಂದ ಪಾಲಕ್ಕಾಡ್ ವಿಭಾಗದ ರೆಕ್ಕೆಗಳನ್ನು ಕತ್ತರಿಸಿದಂತಾಗಿದೆ ಎಂದು ಅಲ್ಲಿನ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇನ್ನೊಂದೆಡೆ, ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಇದು ಐತಿಹಾಸಿಕ ಗೆಲುವು ಎಂದು ದಕ್ಷಿಣ ಕನ್ನಡ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿ ಶ್ರಮಿಸಿದ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರಿಗೆ ವಿಶೇಷ ಅಭಿನಂದನೆಗಳು ಹರಿದುಬಂದಿವೆ.

ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡ ನಿಲ್ದಾಣಗಳಿವು

ಏಕೀಕೃತ ರೈಲ್ವೆ ಆಡಳಿತದಡಿ ದಕ್ಷಿಣ ಕನ್ನಡ ವಿಭಾಗದ ಸುಪರ್ದಿಗೆ ಬರುವ ಪ್ರಮುಖ ನಿಲ್ದಾಣಗಳು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಾಣಂಬೂರು, ತೊಕ್ಕೋಟ್ಟು (ಪಾಟಿಲ್), ಸುರತ್ಕಲ್ (ಕೊಂಕಣ್ ರೈಲ್ವೆ ವ್ಯಾಪ್ತಿ), ಉಲ್ಲಾಳ ಮತ್ತು ಮಂಜೇಶ್ವರ ಎಂದು ವಿವರಿಸಲಾಗಿದೆ. ಈಗ ಇವೆಲ್ಲವೂ ಮೈಸೂರು ರೈಲ್ವೆ ವಿಭಾಗದ ನಿಯಂತ್ರಣಕ್ಕೆ ಬರಲಿವೆ ಎಂಬುದು ಗಮನಾರ್ಹ.

ಕರ್ನಾಟಕದ ಲಾಬಿ ಮೇಲುಗೈ

ಮಂಗಳೂರು ನಗರವು ದಕ್ಷಿಣ ರೈಲ್ವೆ (ಪಾಲಕ್ಕಾಡ್), ಕೊಂಕಣ್ ರೈಲ್ವೆ ಹಾಗೂ ನೈಋತ್ಯ ರೈಲ್ವೆ (ಮೈಸೂರು) ಎಂಬ ಮೂರು ವಿವಿಧ ವಲಯಗಳ ವ್ಯಾಪ್ತಿಗೆ ಹಂಚಿ ಹೋಗಿದ್ದರಿಂದ ಈ ಭಾಗದ ರೈಲ್ವೆ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿತ್ತು ಎಂಬುದು ಕರ್ನಾಟಕದ ಪ್ರಮುಖ ವಾದವಾಗಿತ್ತು. 2024ರ ಜುಲೈನಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳೂರಿನಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ, ಮಂಗಳೂರು ವಲಯವನ್ನು 'ಏಕೀಕೃತ ರೈಲ್ವೆ ಆಡಳಿತ' ವ್ಯಾಪ್ತಿಗೆ ತರಲು ವರದಿ ಸಲ್ಲಿಸುವಂತೆ ದಕ್ಷಿಣ, ನೈಋತ್ಯ ಹಾಗೂ ಕೊಂಕಣ್ ರೈಲ್ವೆ ಜಿಎಂಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆರಂಭದಲ್ಲಿ ಮಂಗಳೂರನ್ನು ಪಾಲಕ್ಕಾಡ್‌ ವಿಭಾಗದಿಂದ ಬಿಟ್ಟುಕೊಡುವುದಿಲ್ಲ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಪಟ್ಟು ಹಿಡಿದಿದ್ದೇ ಆದರೂ, ಕರ್ನಾಟಕದ ಸಚಿವರು, ಜನಪ್ರತಿನಿಧಿಗಳು ಹಾಗೂ ಒಂದಷ್ಟು ಹೋರಾಟಗಾರರ ತೀವ್ರ ಒತ್ತಡದಿಂದಾಗಿ ಇದೀಗ ಕಡೆಗೂ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರ ಅಧಿಕೃತವಾಗಿದೆ,(ಏಜೆನ್ಸೀಸ್).