ನಾಳೆ ‘ಯುಜಿಸಿಇಟಿ-2026’ ಫಲಿತಾಂಶ ಪ್ರಕಟ: ಮಧ್ಯಾಹ್ನ 12 ಗಂಟೆಗೆ ಕೆಇಎ ಕಚೇರಿಯಲ್ಲಿ ರಿಸಲ್ಟ್ ಔಟ್! Karnataka UGCET 2026 Results
- 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿ
- ಜೂನ್ 6ರ ಶನಿವಾರ ಮಧ್ಯಾಹ್ನದಂದು ಸಿಇಟಿ ಫಲಿತಾಂಶ ಅಧಿಕೃತವಾಗಿ ಬಿಡುಗಡೆಯಾಗಲಿದೆ
- ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ರಿಸಲ್ಟ್ ಪ್ರಕಟ
- ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರಿಂದ ಸಿಇಟಿ ಫಲಿತಾಂಶ ಪ್ರಕಟ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ( Karnataka UGCET 2026 Results ) ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದೆ.
ನಾಳೆ ಅಂದರೆ ಜೂನ್ 6ರ ಶನಿವಾರದಂದು ಸಿಇಟಿ ಫಲಿತಾಂಶ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬೆಂಗಳೂರಿನ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಾಳೆ ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಅಭ್ಯರ್ಥಿಗಳ ಭವಿಷ್ಯದ ರಿಸಲ್ಟ್ ಹೊರಬೀಳಲಿದೆ.
ವೈದ್ಯಕೀಯ ಶಿಕ್ಷಣ ಸಚಿವರೂ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹ ಅಧ್ಯಕ್ಷರೂ ಆದ ಡಾ. ಶರಣ ಪ್ರಕಾಶ ಪಾಟೀಲ ಅವರು ನಾಳೆ ಮಧ್ಯಾಹ್ನ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ರಿಸಲ್ಟ್ ಘೋಷಣೆಯ ಬೆನ್ನಲ್ಲೇ ಸಚಿವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದು, ಈ ಬಾರಿಯ ಸಿಇಟಿ ಪರೀಕ್ಷೆಯ ಟಾಪರ್ಸ್ ಯಾರು? ಹಾಗೂ ಇಂಜಿನಿಯರಿಂಗ್, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ರಾಂಕಿಂಗ್ ವಿವರಗಳ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗೆ ಹಂಚಿಕೊಳ್ಳಲಿದ್ದಾರೆ.
ಈ ಮಹತ್ವದ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಖುಷ್ಬು ಗೋಯಲ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹಾಗೂ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಸಚಿವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ.