ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 
ರಾಜ್ಯ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 100 ಕೋಟಿ ಲಾಭ-profit of Rs. 100 crore

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್​​ಸಿ), 2025-26ನೇ ಸಾಲಿನಲ್ಲಿ ತೆರಿಗೆ ಪೂರ್ವದಲ್ಲಿ 155.23 ಕೋಟಿ ರೂ.ಹಾಗೂ ತೆರಿಗೆ ನಂತರ 100 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.

ಸಂಸ್ಥೆ ಅಧ್ಯಕ್ಷ, ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ 67ನೇ ವಾರ್ಷಿಕ ಮಹಾಸಭೆಯಲ್ಲಿ 2026ರ ಮಾ.31ಕ್ಕೆ ಅಂತ್ಯಗೊಂಡ 2025-26ನೇ ಹಣಕಾಸು ವರ್ಷದ ಲೆಕ್ಕಪತ್ರ ಹಾಗೂ ವರದಿ ಮಂಡಿಸಲಾಯಿತು.
ಸಂಸ್ಥೆಯು ವಿವಿಧ ಸಾಲ ಯೋಜನೆಗಳ ಮೂಲಕ ಒಟ್ಟು 1,086.67 ಕೋಟಿ ರೂ. ಸಾಲ ಮಂಜೂರು ಮಾಡಿದೆ. ಇದರಲ್ಲಿ 639 ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕಾ ಉದ್ಯಮಗಳಿಗೆ 1,018.28 ಕೋಟಿ ಸಾಲ ನೀಡಿದೆ. ಸಂಸ್ಥೆಯ ಸ್ಥಾಪನೆಯಿಂದ ಇಲ್ಲಿಯವರೆಗೆ ಒಟ್ಟು 17,228.35 ಕೋಟಿ ರೂ.ಸಾಲ ವಿತರಿಸಲಾಗಿದೆ. ಕಳೆದ ವರ್ಷ 790.32 ಕೋಟಿ ಸಾಲ ಹಾಗೂ 258.57 ಕೋಟಿ ರೂ.ಬಡ್ಡಿ ವಸೂಲಿ ಮಾಡಲಾಗಿದೆ. ಒಟ್ಟು ವಸೂಲಾತಿ 22,429.04 ಕೋಟಿ ರೂ.ಗೆ ತಲುಪಿದೆ ಎಂದು ರಿತೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಶೇ. 3.13 ರಷ್ಟಿದ್ದ ನಿವ್ವಳ ಅನುತ್ಪಾದಕ ಆಸ್ತಿಯು ಈ ವರ್ಷ ಶೇ. 1.58 ಕ್ಕೆ ಇಳಿಕೆಯಾಗಿದೆ. 288ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ 459.35 ಕೋಟಿ ರೂ.., 288 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 415.99 ಕೋಟಿ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರು 32 ಉದ್ಯಮಿಗಳಿಗೆ 59.86 ಕೋಟಿ ರೂ.ಸಾಲ ನೀಡಲಾಗಿದೆ.
ಬಡ್ಡಿ ಸಹಾಯಧನ ಯೋಜನೆಯಡಿ ಸರ್ಕಾರವು, ಸಂಸ್ಥೆಗೆ 99.62 ಕೋಟಿ ರೂ.ನೆರವು ನೀಡಿದೆ. ಎಸ್ಸಿ, ಎಸ್ಟಿ ಉದ್ಯಮಿಗಳ ಜವಳಿ ಮತ್ತು ಕೈಮಗ್ಗ ಉದ್ಯಮಗಳ ಅಭಿವೃದ್ಧಿಗೆ ವಿಶೇಷ ಅನುದಾನದಡಿ 19.24 ಕೋಟಿ ರೂ.ಬಿಡುಗಡೆ ಮಾಡಿದೆ.
2026-27ನೇ ಹಣಕಾಸು ವರ್ಷದಲ್ಲಿ950 ಕೋಟಿ ರೂ.ಸಾಲ ವಿತರಣೆ ಗುರಿ ಹೊಂದಲಾಗಿದೆ. ಆನ್‌ಲೈನ್ ಮೂಲಕ ಸಾಲ ಪ್ರಕ್ರಿಯೆ ಸುಲಭಗೊಳಿಸಲು ಆರಂಭಿಸಲಾದ ಹೊಸ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2026ರ ಏ.1ರಿಂದ ಜು.29ವರೆಗೆ 955 ಕೋಟಿ ರೂ.ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ 528 ವಿಚಾರಣೆಗಳು ಸ್ವೀಕರವಾಗಿವೆ. ಇದರಲ್ಲಿ 70.73 ಕೋಟಿ ರೂ. ಮಂಜೂರು ಮಾಡಲಾಗಿದೆ.ಸಂಸ್ಥೆ ಎಂಡಿ ಡಾ. ಎಂ.ಟಿ.ರೇಜು, ನಿರ್ದೇಶಕ ಬಿ.ಉಳಾಗಿಯನ್ ಮತ್ತಿತರರಿದ್ದರು.