ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದರೆ ಒಗ್ಗಟ್ಟು ಕಾರಣ, ಸೋತರೇ ನಾಯಕರೇ ಹೇಳಿಕೆಗಳೇ ಕಾರಣ! ಬಿಜೆಪಿ ಸೋತರೆ ಹೊಣೆ ಹೊರುವವರು ಯಾರು? Karnataka bypolls 
ರಾಜ್ಯ

ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದರೆ ಒಗ್ಗಟ್ಟು ಕಾರಣ, ಸೋತರೇ ನಾಯಕರೇ ಹೇಳಿಕೆಗಳೇ ಕಾರಣ! ಬಿಜೆಪಿ ಸೋತರೆ ಹೊಣೆ ಹೊರುವವರು ಯಾರು? Karnataka bypolls

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರ ಉಪಚುನಾವಣೆ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ
  • ಸೋಲು-ಗೆಲುವಿಗೆ ಯಾರನ್ನು ಹೊಣೆ ಮಾಡಬೇಕು ಎಂಬುದರ ಬಗ್ಗೆ ಪಕ್ಷಗಳಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ
  • ರಾಜಕೀಯ ಪಡಸಾಲೆಯಲ್ಲೂ ಸೋಲು ಮತ್ತು ಗೆಲುವಿಗೆ ಯಾರು ಕಾರಣರಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ
ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರ ಉಪಚುನಾವಣೆ ( Karnataka bypolls ) ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಅದಕ್ಕೆ ಕಾರಣ ಯಾರು ಅಥವಾ ಸೋತರೆ ಯಾರನ್ನು ಹೊಣೆ ಮಾಡಬೇಕು ಎಂಬುದರ ಬಗ್ಗೆ ಆ ಪಕ್ಷದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಪಡಸಾಲೆಯಲ್ಲೂ ಸೋಲು ಮತ್ತು ಗೆಲುವಿಗೆ ಯಾರು ಕಾರಣರಾಗುತ್ತಾರೆ ಎಂಬುದರ ಬಗ್ಗೆ ಹಲವು ರೀತಿಯಲ್ಲಿ ವ್ಯಾಖ್ಯಾನಗಳು ನಡೆಯುತ್ತಿವೆ.
ಎರಡು ಕ್ಷೇತ್ರದಲ್ಲಿ ದಾಖಲಾದ ಮತದಾನದ ಪ್ರಮಾಣ, ಮತಗಟ್ಟೆ ಸಮೀಪ ಮತದಾರರು ವ್ಯಕ್ತಪಡಿಸಿದ ಅಭಿಪ್ರಾಯ, ಕಾರ್ಯಕರ್ತರು, ಬೆಂಬಲಿಗರು ನೀಡುತ್ತಿರುವ ವರದಿ, ಪಕ್ಷೇತರರು ಪಡೆದ ಮತಗಳ ಪಾಲು ಮತ್ತು ಯಾವ ಜಾತಿ ಯಾರನ್ನು ಬೆಂಬಲಿಸಿರಬಹುದು ಎಂಬ ಮಾಹಿತಿಯನ್ನು ಕಲೆಹಾಕಿರುವ ಉಭಯ ಪಕ್ಷದ ಅಭ್ಯರ್ಥಿಗಳು ಗೆಲುವು ನಮ್ಮದೇ ಎಂದು ಬಿಗುತ್ತಿದ್ದಾರೆ. ಆದರೆ, ಮತದಾರರ ತೀರ್ಪು ಮೇ.4ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ.
ಬಾಗಲಕೋಟೆ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ಸ್ಪರ್ಧಿಸಿದ್ದರು. ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿರೀಕ್ಷಿತಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗದಿರುವುದು 2 ಪಕ್ಷಗಳ ರಾಜಕೀಯ ನಾಯಕರ ಲೆಕ್ಕಾಚಾರ ಕಠಿಣಗೊಳಿಸಿದೆ. ಕೂಡಿ, ಕಳೆದರೂ ಲೆಕ್ಕಾಚಾರ ಪಕ್ಕಾ ಆಗುತ್ತಿಲ್ಲ. 2023ರಲ್ಲಿ ಚಲಾವಣೆಯಾಗಿದ್ದಕ್ಕಿಂತ ಉಪ ಚುನಾವಣೆಯಲ್ಲಿ ಶೇ.5ರಿಂದ 7ರಷ್ಟು ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾಗಲಿವೆ ಎಂಬ ನಿರೀಕ್ಷೆ ನಾಯಕರದ್ದಾಗಿತ್ತು. ಹಿಂದೆಂದೂ ಮಾಡದ ಪ್ರಮಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಎರಡೂ ಪಕ್ಷಗಳ ನಾಯಕರು ತಿಂಗಳುಗಟ್ಟಲೇ ತಳಮಟ್ಟದಲ್ಲಿ ಸರ್ವೆ ಮಾಡಿದ್ದರು. ಆದರೂ ಮತದಾರರು ಮತಗಟ್ಟೆಗೆ ಬಂದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭಾವಗೊಂಡಿದ್ದ ವೀರಣ್ಣ ಚರಂತಿಮಠ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿಯವರ ವಾದವಾದರೆ, ಎಚ್.ವೈ.ಮೇಟಿ ಅವರ ನಿಧನದ ಅನುಕಂಪವು ಕಾಂಗ್ರೆಸ್‌ನ ಉಮೇಶ್ ಮೇಟಿ ವರದಾನವಾಗಿದ್ದು, ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎನ್ನುವುದು ಕಾಂಗ್ರೆಸ್ ಮುಖಂಡರ ಪ್ರತಿ ವಾದವಾಗಿದೆ.
ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಟಿ. ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ 25 ಉಮೇದುವಾರರು ಕಣದಲ್ಲಿದ್ದರು. 2 ಪಕ್ಷಗಳ ನಡುವೆ ನೇರ ಪೈಪೋಟಿ ಇರುವಂತೆ ಕಂಡರೂ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಂ ಸಮುದಾಯದ ಮತಗಳು ಚದುರಿ ಹೋಗಿರುವ ಮಾತುಗಳು ಕೇಳಿಬರುತ್ತಿವೆ. ಕಣದಲ್ಲಿದ್ದ 25 ಅಭ್ಯರ್ಥಿಗಳಲ್ಲಿ ಮುಸ್ಲಿಂ ಸಮುದಾಯದ 14 ಹುರಿಯಾಳುಗಳಿದ್ದರು. ಒಬ್ಬರು ನಿವೃತ್ತಿ ಘೋಷಣೆ ಮಾಡಿದರೂ ಇತರರು ಸಮುದಾಯದ ರಾಜಕೀಯ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರು. ಹಸ್ತದ ಗುರುತಿಗೆ ಇಡಿಯಾಗಿ ಹೋಗುತ್ತಿದ್ದ ಈ ಮತಗಳನ್ನು ಕಿತ್ತುಕೊಳ್ಳುವಲ್ಲಿ ಯಾರು ಯಶಸ್ವಿಯಾಗಿದ್ದಾರೆ? ಎಂಬ ಕುತೂಹಲ ಕೆರಳಿಸಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆಯೇ? ಎಂಬ ಕೌತಕವೂ ಮೂಡಿದೆ.

ಸೋತರೆ ವಿಜಯೇಂದ್ರ ತಲೆಗೆಕಟ್ಟಲು ಹುನ್ನಾರ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಲೆಗೆ ಕಟ್ಟಲು, ಸ್ವಪಕ್ಷದ ವಿರೋಧಿಗಳು ಒಳಗೊಳಗೆ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ವಾಸ್ತವ ಎಂಬಂತೆ, ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯ ಕೆಲ ನಾಯಕರು, ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಈ ಹೇಳಿಕೆಗಳು ಆ ಪಕ್ಷದ ಅಭ್ಯರ್ಥಿಗಳಿಗೆ ಮುಳುವಾಗುವ ಸಾಧ್ಯತೆ ಇದೆ.
ನಾಯಕರ ಹೇಳಿಕೆಗಳೇ ಬಿಜೆಪಿ ಅಭ್ಯರ್ಥಿಗೆ ಮುಳುವಾಗುತ್ತಾ?
ಟುರ್, ಗಡ್ಡದ ಬಗ್ಗೆ ಮಾತಾಡಿ ಎರಡು ಸಮುದಾಯಗಳನ್ನು ಕೆರಳಿಸಿದ್ದ ಶಾಸಕ ಸಿ.ಸಿ. ಪಾಟೀಲ್
ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟುರ್ ಎನ್ನುವ ಮೂಲಕ ಕುರುಬ ಸಮುದಾಯದವರನ್ನು ಕೆರಳಿಸಿರುವುದು
ಗಡ್ಡದವರನ್ನ ಸೋಲಿಸಬೇಕು ಎನ್ನುವ ಮೂಲಕ ಅಲ್ಪಸಂಖ್ಯಾತ ಸಮುದಾಯದವರ ನಿಂದನೆ
ಪಂಚಮಸಾಲಿ ಸಭೆಯಲ್ಲಿ ಈ ಮೇಲಿನ ಹೇಳಿಕೆ ನೀಡಿ ಪೀಕಲಾಟ ತಂದಿದ್ದ ಸಿ.ಸಿ. ಪಾಟೀಲ್
ಸಿದ್ದರಾಮಯ್ಯ ಅವರ ತುದಿ ಕಟ್ ಮಾಡಿಸಿಕೊಳ್ಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯ ಎಡವಟ್ಟು
ಪ್ರತಾಪ್ ಸಿಂಹ ಹೇಳಿಕೆಯು ಅಂದಾಜು 35 ಸಾವಿರ ಮತ ಇರುವ ಕುರುಬ ಸಮುದಾಯದಲ್ಲಿ ಆಕ್ಷೇಪ
ಬಿಜೆಪಿ ಕೈಹಿಡಿಯಬೇಕಿದ್ದ ಕುರುಬ ಸಮುದಾಯದ ಮತ ಕಾಂಗ್ರೆಸ್‌ನತ್ತ ವಾಲಿರುವುದು
ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಉಡಾಫೆ ಹೇಳಿಕೆ
ವಿಜಯಪುರದಿಂದ ಮತ ಕೇಳಲು ಬಂದಿದ್ದ ಸ್ವಪಕ್ಷದವರನ್ನೇ ಟೀಕಿಸಿದ್ದ ಯತ್ನಾಳ್
ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಬಿ.ವೈ.ವಿಜಯೇಂದ್ರರನ್ನು ಪ್ರಚಾರದುದ್ದಕ್ಕೂ ಬೈದುಕೊಂಡು ಓಡಾಡಿದ್ದ ಯತ್ನಾಳ್

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಸೋತರೆ ಕಾರಣವೇನು?
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಕಾಂಗ್ರೆಸ್‌ನವರೇ ಕಾರಣ
ಅಲ್ಪಸಂಖ್ಯಾತ ಸಮುದಾಯದ ನಾಯಕರ ಒಳಜಗಳವೇ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ
ಆರಂಭದಲ್ಲೇ ಟಿಕೆಟ್‌ಗಾಗಿ ಅಲ್ಪಸಂಖ್ಯಾತ ಸಮುದಾಯದ ಫೈಟ್
ಸಚಿವ ಬಿ.ಝಡ್. ಜಮೀರ್ ಅಹ್ಮದ್ ಪ್ರಚಾರಕ್ಕೆ ಹೋಗದೇ ಸಮುದಾಯವೇ ಇಬ್ಬಾಗ ಆಗುವಂತೆ ಸಂದೇಶ ರವಾನೆ
ಅಲ್ಪಸಂಖ್ಯಾತ ಸಮುದಾಯದಿಂದ ಹಲವು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇದರಿಂದ ಕಾಂಗ್ರೆಸ್‌ಗೆ ಒಳಯೇಟು ಭೀತಿ
ಪಕ್ಷೇತರರ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡಿದ್ದೇ ಕಾಂಗ್ರೆಸ್ ಮುಸ್ಲಿಂ ನಾಯಕ ಎನ್ನುವ ಆರೋಪ
ಸಮರ್ಥ್ ಗೆದ್ದರೆ ಮುಂದಿನ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೇಳುವುದಕ್ಕೆ ಆಗಲ್ಲ
ಸಮರ್ಥ್ ಸೋಲಿಸಬೇಕು ಎಂಬ ಹಠಕ್ಕೆ ಬಿದ್ದ ಮುಸ್ಲಿಂ ನಾಯಕರು