ಆಗ್ನೇಯದಲ್ಲಿ ಕೆ ಎಂ ಸುರೇಶ್ ಜಯ!... 
ರಾಜ್ಯ

ಆಗ್ನೇಯದಲ್ಲಿ ಕೆ ಎಂ ಸುರೇಶ್ ಜಯ!...ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳೂ ಎನ್‌ಡಿಎ ತೆಕ್ಕೆಗೆ: ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗ!

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶಶಿ ಹುಲಿಕುಂಟೆಮಠ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿರುವ ಸುರೇಶ್ ಗೆಲುವಿನ ನಗೆ ಬೀರಿದ್ದಾರೆ.

ಎನ್​ಡಿಎ ಅಭ್ಯರ್ಥಿ ಸುರೇಶ್ ಒಟ್ಟು 66,020 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ 42,922 ಮತಗಳನ್ನು ಗಳಿಸಿದರು. ಇದರೊಂದಿಗೆ ಕೆ.ಎಂ. ಸುರೇಶ್ ಅವರು 23,098 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದು, ವಿಶೇಷವೆಂದರೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ನಿರ್ಣಯವಾಗಿದೆ. ಈ ಜಯದೊಂದಿಗೆ ಬಿಜೆಪಿ ತನ್ನ ಕೈಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಾಲಿ ಪರಿಷತ್ ಸದಸ್ಯ ಚಿದಾನಂದ ಗೌಡ ಅವರ ಬದಲಿಗೆ ದಾವಣಗೆರೆ ಮೂಲದ ಕೆ ಎಂ ಸುರೇಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಮತ್ತೊಂದೆಡೆ ಕಾಂಗ್ರೆಸ್ ತುಮಕೂರಿನ ಶಶಿ ಹುಲಿಕುಂಟೆಮಠ್ ಅವರನ್ನು ಅಭ್ಯರ್ಥಿಯನ್ನಾಗಿಸಿತ್ತು. ಈ ಇಬ್ಬರೂ ನಾಯಕರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಕ್ಷೇತ್ರದಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದೆ.

ಮತ ಎಣಿಕೆ ಮತ್ತು ತಿರಸ್ಕೃತ ಮತಗಳ ವಿವರ

ಮತಗಳ ವಿವರ ಹೀಗಿದೆ

ಚುನಾವಣೆಯಲ್ಲಿ ಒಟ್ಟು 1,32,138 ಮತಗಳು ಚಲಾವಣೆಗೊಂಡಿದ್ದು, ಈ ಪೈಕಿ ಬರೋಬ್ಬರಿ 20,076 ಮತಗಳು ತಿರಸ್ಕೃತಗೊಂಡಿವೆ. ಮಂಗಳವಾರ ಸಂಜೆ 4 ಗಂಟೆಗೆ ಆರಂಭವಾದ ಮತ ಎಣಿಕೆ ರಾತ್ರಿ ಪೂರ್ತಿ ನಡೆದು ಬುಧವಾರ ಬೆಳಿಗ್ಗೆ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡಿತು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಬಂದ ಬಿಜೆಪಿ ಅಭ್ಯರ್ಥಿ ಕೆ ಎಂ ಸುರೇಶ್, ಪ್ರತಿ ಸುತ್ತಿನಲ್ಲೂ ತಮ್ಮ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿ, ಅಂತಿಮ ಹಾಗೂ 10ನೇ ಸುತ್ತಿನ ಎಣಿಕೆಯ ಬಳಿಕ ಅಧಿಕೃತವಾಗಿ ವಿಜಯಶಾಲಿಯಾದರು.