ಸಿಗ್ತಿಲ್ಲ ವಾಣಿಜ್ಯ ಬಳಕೆ ಸಿಲಿಂಡರ್​​​ 
ರಾಜ್ಯ

ಹೋಟೆಲ್‌ಗಳಿಗೂ ಸಿಗ್ತಿಲ್ಲ ಎಲ್ಪಿಜಿ ಸಿಲಿಂಡರ್ : ಮಾಲೀಕರು ಕಂಗಾಲು

ಹರೀಶ್​​ ಕೆ.ಸಿ.
ಬೆಂಗಳೂರು: ಕೊಲ್ಲಿ ಕದನ ಪರಿಣಾಮ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲೇ ಇದೀಗ ಹೋಟೆಲ್ ಉದ್ಯಮಕ್ಕೂ ಸಂಕಷ್ಟ ಎದುರಾಗಿದ್ದು, ಹೋಟೆಲ್‌ಗಳಿಗೆ ಪೂರೈಸುತ್ತಿದ್ದ ವಾಣಿಜ್ಯ ಬಳಕೆ ಸಿಲಿಂಡರ್ ವಿತರಣೆಯನ್ನು ಗ್ಯಾಸ್ ಏಜೆನ್ಸಿಗಳು ಸ್ಥಗಿತಗೊಳಿಸಿವೆ.
ಬೆಂಗಳೂರಿನಲ್ಲಿ 8 ಸಾವಿರ ಸೇರಿ ರಾಜ್ಯದಲ್ಲಿ ಅಂದಾಜು 40 ಸಾವಿರ ಹೋಟೆಲ್‌ಗಳಿವೆ. ದರ್ಶಿನಿಯಂತಹ ಹೋಟೆಲ್‌ಗಳು 19 ಕೆಜಿ ಮತ್ತು ಸ್ಟಾರ್ ಹೋಟೆಲ್‌ಗಳು 47.5 ಕೆಜಿಯ ವಾಣಿಜ್ಯ ಸಿಲಿಂಡರ್ ಉಪಯೋಗಿಸುತ್ತಿವೆ. ಆದರೆ, ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಕಾರಣ, ಭಾರತಕ್ಕೆ ಸರಬರಾಜು ಆಗುತ್ತಿದ್ದ ಪೆಟ್ರೋಲ್, ಡೀಸೆಲ್, ಗ್ಯಾಸ್ ಮೇಲೆ ಪರಿಣಾಮ ಉಂಟಾಗಿದೆ.
ಹೀಗಾಗಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್‌ಪಿಸಿಎಲ್) ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.( ಬಿಪಿಸಿಎಲ್) ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್‌ಗೆ ಯಾವುದೇ ತೊಂದರೆಯಾಗದಂತೆ ಹೋಟೆಲ್‌ಗಳು ಬಳಸುವ ವಾಣಿಜ್ಯ ಸಿಲಿಂಡರ್‌ಗೆ ಮಿತಿ ಹೇರಿರುವ ಕ್ರಮಕೈಗೊಂಡಿದೆ ಎನ್ನಲಾಗಿದೆ. ಇದರಿಂದ ಗ್ಯಾಸ್ ಏಜೆನ್ಸಿಗಳು ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪೂರೈಕೆಯನ್ನು ಏಕಾಏಕಿ ಸ್ಥಗಿತಗೊಳಿಸಿವೆ.
ಅಗತ್ಯ ಸೇವೆ ಅಡಿ ಹೋಟೆಲ್ ಉದ್ಯಮ:
ಹೋಟೆಲ್ ಉದ್ಯಮ ಅಗತ್ಯ ಸೇವೆ ಅಡಿ ಬರುವುದರಿಂದ ಇದನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸೇರಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಗ್ಯಾಸ್ ಸರಬರಾಜು ಸಾಮಾನ್ಯ ಸ್ಥಿತಿ ಬರುವವರೆಗೆ ಹೋಟೆಲ್‌ಗಳು ನಷ್ಟ ಅನುಭವಿಸಲಿವೆ. 70 ದಿನದವರೆಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ಆಡಚಣೆ ಉಂಟಾಗುವುದಿಲ್ಲ ಎಂದು ತೈಲ ಕಂಪನಿಗಳು ತಿಳಿಸಿದ್ದವು. ಹೀಗಿದ್ದರೂ, ಏಕಾಏಕಿ ಸರಬರಾಜು ನಿಲ್ಲಿಸಿರುವುದು ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಾಗಾಗಿ, ಈ ಬಗ್ಗೆ ಕೇಂದ್ರ ಸಚಿವರು ಸಮಸ್ಯೆ ಬಗೆಹರಿಸಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಒತ್ತಾಯಿಸಿದೆ.
ಊಟ-ತಿಂಡಿ ದರ ಹೆಚ್ಚಳ ಸಾಧ್ಯತೆ?
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಕಾಫಿ, ಟೀ, ತಿಂಡಿ ಮತ್ತು ಊಟದ ಮೇಲೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದರ ಏರಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯಾಪಾರ ಕುಸಿಯುವ ಭೀತಿಯಲ್ಲಿ ಹೋಟೆಲ್‌ಗಳ ಮಾಲೀಕರು ಸಿಲುಕಿಕೊಂಡಿದ್ದಾರೆ. ಆದರೂ, ಅನಿವಾರ್ಯವಾಗಿ ದರ ಹೆಚ್ಚಿಸರುವ ಪರಿಸ್ಥಿತಿಯಲ್ಲಿ ಮಾಲೀಕರು ಒಳಗಾಗಿದ್ದಾರೆ.
ಪರ್ಯಾಯ ವ್ಯವಸ್ಥೆ ಏನು?
ತೈಲ ಕಂಪನಿಗಳು ಏಕಾಏಕಿ ವಾಣಿಜ್ಯ ಬಳಕೆಯ ಸಿಲಿಂಡರ್ ವಿತರಣೆ ನಿಲ್ಲಿಸಿದ್ದರಿಂದ ಬ್ಲಾಕ್ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರಕ್ಕೆ ಸಿಲಿಂಡರ್ ಖರೀದಿಸಬೇಕಾದ ಪರಿಸ್ಥಿತಿ ಹೋಟೆಲ್ ಉದ್ಯಮಕ್ಕೆ ಎದುರಾಗಲಿದೆ. ಆದರೆ, ಇದು ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಈ ವ್ಯವಸ್ಥೆಯನ್ನು ಮಾಲೀಕರು ಮಾಡಿಕೊಳ್ಳಬಹುದು. ಆದರೆ, ತಿಂಗಳಗಟ್ಟಲೆ ಸಿಲಿಂಡರ್ ಸಿಗದಿದ್ದರೆ ಹೋಟೆಲ್‌ಗಳು ಮುಚ್ಚಬೇಕಾಗುತ್ತದೆ. ಆದ್ದರಿಂದ, ಈ ಬಗ್ಗೆ ರಾಜ್ಯ ಸರ್ಕಾರ, ಕೇಂದ್ರದ ಮೇಲೆ ಒತ್ತಡ ತಂದು ಸಮಸ್ಯೆ ಬಗೆಹರಿಸಬೇಕಿದೆ.