Bird Flu  
ರಾಜ್ಯ

ಹೆಸರಘಟ್ಟ ಕೋಳಿ ಫಾರ್ಮ್‌ನಲ್ಲಿ ಹಕ್ಕಿ ಜ್ವರ ದೃಢ: 1 ಕಿ.ಮೀ ವ್ಯಾಪ್ತಿ 'ಸೋಂಕಿತ ವಲಯ' ಎಂದು ಘೋಷಣೆ..bird flu

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಹೆಸರಘಟ್ಟದ ಮತ್ಕೂರಲ್ಲಿ H5N1 ಹಕ್ಕಿಜ್ವರ ದೃಢ
  • ಮುತ್ಕೂರು ಗ್ರಾಮದ 1km ವ್ಯಾಪ್ತಿ ಸೋಂಕಿತ, 10 ಕಿ.ಮೀ ಪ್ರದೇಶ ಕಣ್ಗಾವಲು ವಲಯ ಎಂದು ಗುರುತು
  • ಮನುಷ್ಯರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ, ಆದರೆ ಎಚ್ಚರಿಕೆ ವಹಿಸುವಂತೆ ಸೂಚನೆ
ಬೆಂಗಳೂರು: ಹೆಸರಘಟ್ಟದಲ್ಲಿರುವ ಸರ್ಕಾರಿ  ಕೋಳಿ ಸಾಕಣೆ ಪ್ರದೇಶವನ್ನು ಬೆಂಗಳೂರು ನಗರ ಜಿಲ್ಲಾಡಳಿತವು ಹಕ್ಕಿ ಜ್ವರ(Bird Flu) ಸೋಂಕಿತ ವಲಯ ಎಂದು ಗುರುತಿಸಿದೆ. ಮುತ್ಕೂರು ಗ್ರಾಮವನ್ನು ಸೋಂಕಿತ ವಲಯ ಮತ್ತು ಸುತ್ತಲಿನ 10 ಕಿ.ಮೀ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಆರೋಗ್ಯ ಇಲಾಖೆ ಘೋಷಿಸಿದೆ. 
ಸರ್ಕಾರದ ಮಾರ್ಗಸೂಚಿ ಪ್ರಕಾರ, ಸೋಂಕಿತ ವಲಯದಲ್ಲಿರುವ ಕೋಳಿಗಳು ಮತ್ತು ಮೊಟ್ಟೆಗಳನ್ನು ಹಾಗೂ ಕೋಳಿಯ ಆಹಾರವನ್ನು  ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಕೋಳಿ ಮಾಂಸ, ಮೊಟ್ಟೆ ಹಾಗೂ ಪಕ್ಷಿಗಳ ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

ಮೊಟ್ಟೆ , ಕೋಳಿ ಸಾಗಾಟ ನಿಷೇಧ

ಹೆಸರಘಟ್ಟದಿಂದ ಬೆಂಗಳೂರಿನ ಇತರ ಗ್ರಾಮಕ್ಕೆ ಕೋಳಿ ಉತ್ಪನ್ನ ಸಾಗಾಟ ಮಾಡೋದನ್ನು ನಿಷೇಧಿಸಿರುವ ಕಾರಣ, ಅಕ್ರಮವಾಗಿ ಸಾಗಣೆಯಾಗುವುದನ್ನು ತಡೆಯಲು  ತಡೆಯಲು ಪ್ರಮುಖ ರಸ್ತೆಗಳಲ್ಲಿ 5 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು 10 ಕಿ.ಮೀ ವ್ಯಾಪ್ತಿಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸುತ್ತಿದ್ದು, ಯಾವುದೇ ಪಕ್ಷಿಗಳ ಅಸಹಜ ಸಾವು ಸಂಭವಿಸಿದರೆ ತಕ್ಷಣ ವರದಿ ಮಾಡಲು ಸೂಚಿಸಿದ್ದಾರೆ ಎಂದು ಹೇಳಿದರು.

ದಿನೇಶ್​ ಗುಂಡುರಾವ್ ಹೇಳಿದ್ದೇನು?

ಬೆಂಗಳೂರಿನ ಹೆಸರಘಟ್ಟದ ಮತ್ಕೂರಲ್ಲಿ H5N1 ಹಕ್ಕಿಜ್ವರ ದೃಢಪಟ್ಟಿದೆ.  ಸಾರ್ವಜನಿಕರಿಗೆ ಆತಂಕ ಪಡಬೇಡಿ, ಆದರೆ, ಜಾಗರೂಕತೆ ಅಗತ್ಯ. ಮನುಷ್ಯರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ,  ಆದರೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಭೋಪಾಲ್‌ನ NIHSAD ಪ್ರಯೋಗಾಲಯದ ವರದಿಯ ಪ್ರಕಾರ, ಏಪ್ರಿಲ್​​ 14 ರಂದು ಮತ್ಕೂರಿನ ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ.  ವಿಷಯ ತಿಳಿಯುತ್ತಿದ್ದಂತೆಯೇ ಏಪ್ರಿಲ್ 16 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ತ್ವರಿತ ಪ್ರತಿಕ್ರಿಯೆ ತಂಡಗಳು (RRT) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. 
ಏಪ್ರಿಲ್ 15 ರಂದು ಪಶುಪಾಲನಾ ಇಲಾಖೆಯ ನೇತೃತ್ವದಲ್ಲಿ 7,444 ಕೋಳಿಗಳು, 14 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.  ಈ ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ‘ಒಸೆಲ್ಟಾಮಿವಿರ್’ ಔಷಧ ನೀಡಿ ವೈದ್ಯಕೀಯ ನಿಗಾ ವಹಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಕಣ್ಗಾವಲ್ಲಿರಲಿದ್ದಾರೆ ಜನ

ಸೋಂಕಿತ ವಲಯದ ವ್ಯಾಪ್ತಿಯಲ್ಲಿ ಬರುವ 2 ಗ್ರಾಮಗಳ 3,422 ಜನಸಂಖ್ಯೆ ಹಾಗೂ ಕಣ್ಗಾವಲು ವಲಯದ 17 ಗ್ರಾಮಗಳ 22,395 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಜ್ವರದ ತಪಾಸಣೆ ನಡೆಸಲಿದ್ದಾರೆ ಎಂದು ಅವರು ಹೇಳಿದರು, (ಏಜೆನ್ಸೀಸ್​).