2028ರ ಚುನಾವಣೆಗೆ ನಿಲ್ಲಿ! ಜನರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್​ ಹೀಗಿತ್ತು | Siddaramaiah  
ರಾಜ್ಯ

2028ರ ಚುನಾವಣೆಗೆ ನಿಲ್ಲಿ! ವರುಣ ಜನರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್​ ಹೀಗಿತ್ತು | Siddaramaiah

ಇಲ್ಲಿ ಸೋಲು-ಗೆಲವು ಎಲ್ಲವನ್ನೂ ನೋಡಿದ್ದೇನೆ. ಎಂಟು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಅವಧಿಯಲ್ಲಿ 5 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ತೃಪ್ತಿ, ಸಂತೋಷ ಇದೆ. ನುಡಿದಂತೆ ನಡೆದಿದ್ದೇನೆ ಎಂಬ ಸಂತೋಷವಿದೆ.

ಮೈಸೂರು: ವರುಣ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಉದ್ಘಾಟನೆ ನೆರವೇರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ರಾಜ್ಯದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತನಾಡಿದರು.

"ರಾಜ್ಯದಲ್ಲಿ ಭೀಕರ ಬರಗಾಲ‌ ಇದೆ. 150 ವರ್ಷಗಳಲ್ಲೇ ಅತಿ ದೊಡ್ಡ ಭೀಕರ ಬರ ಇದಾಗಿದೆ. 220 ತಾಲೂಕು ಈ ಹೊಡೆತಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಿದ್ದರೂ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿ ಆಗಿದ್ದಾರೆ. ನಾನು‌ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಯಾವಾಗ ಹೇಳ್ತಾರೆ, ಅಂದೇ ಸಿಎಂ ಸ್ಥಾನವನ್ನು ಬಿಡುತ್ತೇನೆ ಎಂದು ನಾಲ್ಕೈದು ಬಾರಿ ಹೇಳಿದ್ದೆ. ಅಂತೆಯೇ, ನಡೆದುಕೊಂಡಿದ್ದೇನೆ" ಎಂದರು.

"ನಾನು ನುಡಿದಂತೆ ನಡೆದುಕೊಂಡಿದ್ದಿನಿ. ಶಾಸಕನಾಗಿ ಇರಲಿ, ಇಲ್ಲದೆ ಇರಲಿ, ವರುಣ ಕ್ಷೇತ್ರದ ಸೇವೆ ಮಾಡುತ್ತೇನೆ. 40 ವರ್ಷ ರಾಜಕೀಯದಲ್ಲಿ ಇದ್ದೀನಿ. ಇಲ್ಲಿ ಸೋಲು-ಗೆಲವು ಎಲ್ಲವನ್ನೂ ನೋಡಿದ್ದೇನೆ. ಎಂಟು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಅವಧಿಯಲ್ಲಿ 5 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ತೃಪ್ತಿ, ಸಂತೋಷ ಇದೆ. ನುಡಿದಂತೆ ನಡೆದಿದ್ದೇನೆ ಎಂಬ ಸಂತೋಷವಿದೆ. ಇನ್ನೂ ಒಂದೂವರೆ ವರ್ಷ ಶಾಸಕನಾಗಿ ಇರುತ್ತೇನೆ. ಯತೀಂದ್ರ ಅವರಿಗೂ ನಿಮ್ಮ ಆಶೀರ್ವಾದ ಇರಬೇಕು" ಎಂದು ಕೇಳಿಕೊಂಡರು.

ಈ ಮಧ್ಯೆ, ನೀವು ಮತ್ತೆ 2028ರ ಚುನಾವಣೆಗೂ ನಿಲ್ಲಬೇಕು. ನಿಮ್ಮನ್ನು ನಾವು ಗೆಲ್ಲಿಸುತ್ತೀವಿ ಎಂದು ವರುಣ ಕ್ಷೇತ್ರದ ಜನರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಅವರು ಭಾಷಣ ಮುಗಿಸಿದ್ದು ಮಾಜಿ ಸಿಎಂ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತು.