ಮೈಸೂರು: ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಸತತ ಆರು ವರ್ಷಗಳ ಕಾಲ ಚಿನ್ನದ ಅಂಬಾರಿಯ ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ಕ್ಯಾಪ್ಟನ್ ಅಭಿಮನ್ಯುವನ್ನು ಕೊನೆಗೂ ಮೈಸೂರಿಗರ ಆಸೆಯಂತೆ, ಈ ಬಾರಿಯ ದಸರಾದಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.
60 ವರ್ಷ ವಯಸ್ಸಾಯಿತು ಎಂಬ ಒಂದೇ ಒಂದು ಕಾರಣಕ್ಕೆ, ಈ ವರ್ಷದ ದಸರಾದಲ್ಲಿ ಅಭಿಮನ್ಯು ಅಂಬಾರಿ ಹೊರುವುದು ಬೇಡವೆಂದು ಅರಣ್ಯ ಇಲಾಖೆ ನಿರ್ಧರಿಸಿತು. ಇದರ ಹಿನ್ನೆಲೆಯಲ್ಲಿ, ಕ್ಯಾಪ್ಟನ್ಗೆ ತಾಯಿ ಚಾಮುಂಡೇಶ್ವರಿಯನ್ನು ಹೊರುವ ಜವಾಬ್ದಾರಿಯಿಂದ ವಿಶ್ರಾಂತಿ ನೀಡಲಾಯಿತು. ಆದರೆ, ನಿಶಾನೆ ಆನೆಯಾಗಿ ಅಥವಾ ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಇರಬೇಕು ಎಂಬ ಮೈಸೂರಿಗರ ಜೋರಾದ ಕೂಗುಗಳು ಕೊನೆಗೂ ಫಲಿಸಿದೆ. ದಸರಾ ಸಿದ್ಧತೆಯ ಭಾಗವಾಗಿ ಸೋಮವಾರ ಅರಮನೆ ಆವರಣಕ್ಕೆ ಆಗಮಿಸಿದ ಅಭಿಮನ್ಯುವಿಗೆ ವಿಶೇಷ ಪೂಜೆ ಸಲ್ಲಿಸಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.
ಅರಮನೆಯ ಅಂಗಳಕ್ಕೆ ಅಭಿಮನ್ಯು ಪ್ರವೇಶಿಸುತ್ತಿದ್ದಂತೆ, ಆತನನ್ನು ಕಂಡ ಜನರು ಹಾಗೂ ಪ್ರವಾಸಿಗರಲ್ಲಿ ವಿಶೇಷ ಕುತೂಹಲ ಮೂಡಿತು. ಕಳೆದ ಆರು ವರ್ಷಗಳ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಲಕ್ಷಾಂತರ ಜನರ ಗಮನ ಸೆಳೆದಿದ್ದ ಅಭಿಮನ್ಯು, ಈ ಬಾರಿ ಅಂಬಾರಿಯ ಬದಲು ನಿಶಾನೆಯನ್ನು ಹೊತ್ತು ಸಾಗಲಿದ್ದಾನೆ ಎಂಬುದು ಮೈಸೂರಿಗರ ಖುಷಿ. ಮತ್ತೊಂದೆಡೆ, ಅರಮನೆಗೆ ಕಾಲಿಟ್ಟ ಅಭಿಮನ್ಯುಗೆ ಅಭಿಮಾನಿಗಳು ನಾಲ್ವಡಿ ಮಾದರಿಯ ವಿಶೇಷ ಪೇಟೆ ತೊಡಿಸಿ ಗೌರವಿಸಿದ್ದು ವಿಶೇಷ.
ಅಭಿಮನ್ಯುವಿನ ಪಾಲಿಗೆ ಇದು ಕೊನೆಯ ದಸರಾ ಮಹೋತ್ಸವವಾಗಿದ್ದು, ಹಲವು ವರ್ಷಗಳ ಸೇವೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ಈ ಬಾರಿಯ ದಸರಾ ಅವನಿಗೆ ಬೀಳ್ಕೊಡುಗೆಯ ಕ್ಷಣವಾಗಲಿದೆ. ಅಂಬಾರಿ ಆನೆಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಮೈಸೂರು ದಸರಾ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಭಿಮನ್ಯುವಿನ ಕೊನೆಯ ದಸರಾ ಜಂಬೂ ಸವಾರಿ ವಿಶೇಷವಾಗಿರಲಿದೆ.
ಈ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಮೈಸೂರಲ್ಲಿ ಅಭಿಮನ್ಯು ಆನೆಯನ್ನು ಕರೆಸುವಂತೆ ಪ್ರತಿಭಟನೆಯನ್ನು ಕೂಡ ನಡೆಸಲಾಗಿತ್ತು. 2026ರ ಮೈಸೂರು ದಸರಾ ಮಹೋತ್ಸವದಲ್ಲಿ ಅಭಿಮನ್ಯುಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕೊಡಬೇಕು ಮತ್ತು ಸಕಲ ಸರ್ಕಾರಿ ಗೌರವದೊಂದಿಗೆ ಬಿಳ್ಕೊಡಬೇಕು ಎಂಬ ಕೂಗುಗಳು ಜೋರಾದ ಹಿನ್ನೆಲೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕೃತ ಆದೇಶದ ಮೂಲಕ ಅಸ್ತು ಎಂದರು. ಅದರ ಅನ್ವಯ, ಇಂದು ಅರಮನೆ ಪ್ರವೇಶಿಸಿದ ಅಭಿಮನ್ಯುವನ್ನು ಕಂಡು ಸಂತಸಪಟ್ಟ ಅಭಿಮಾನಿಗಳು, ವಿಶೇಷ ಪೇಟ ತೊಡಿಸಿ ಸಂಭ್ರಮಿಸಿದರು.