ರಾಜ್ಯದಲ್ಲಿ ಮುಂದಿನ 3-4 ದಿನ ಮಳೆ  
ರಾಜ್ಯ

ರಾಜ್ಯದಲ್ಲಿ 4 ದಿನ ಮಳೆ: ಕರಾವಳಿ, ಮಲೆನಾಡಲ್ಲಿ ಬಿರುಸು-Rain for 4 days in the state

ಬೆಂಗಳೂರು:ಓರಿಸ್ಸಾದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದಲ್ಲಿ ಮುಂದಿನ 3-4 ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರಾವಳಿ ಭಾಗದಲ್ಲಿ ಮಾನ್ಸೂನ್ ಮತ್ತೆ ಸಕ್ರಿಯವಾಗಿರುವ ಕಾರಣ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಬಿರುಸಾಗಿ ಮಳೆ ಸುರಿದಿದೆ. ದಕ್ಷಿಣ ಕನ್ನಡದ ಶಕ್ತಿನಗರದ 19, ಮಂಗಳೂರು 17, ಮೂಲ್ಕಿ 17, ಉತ್ತರ ಕನ್ನಡದ ಕುಮಟಾ 15, ಮಂಕಿ 15, ಉಡುಪಿಯ ಕುಂದಾಪುರ 13, ಕೊಲ್ಲೂರು 11, ಕೋಟ 10, ಚಿಕ್ಕಮಗಳೂರಿನ ಶೃಂಗೇರಿ 6 ಸೆಂಮೀ ಮಳೆ ಬಿದ್ದಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.18ರಿಂದ ಜು.20ವರೆಗೆ ಮತ್ತು ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ ಎರಡು ದಿನ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ.
ದ.ಕರ್ನಾಟಕದಲ್ಲಿ ಸಾಧಾರಣ:
ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ತುಸು ಜೋರು ಮಳೆಯಾದರೆ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಸಾಧಾರಣವಾಗಿ ಸುರಿಯಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿಯಲ್ಲಿ ಮುಂದಿನ 3 ದಿನ ಸಾಧಾರಣ ಮಳೆ ಬೀಳಲಿದೆ.