ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕುಟುಂಬ 
ರಾಜ್ಯ

ಭಾರಿ ಸಾಲದ ಹೊರೆ; ಬೆಂಗಳೂರಿನಲ್ಲಿ ತಾಯಿ, ಅಕ್ಕ ಮತ್ತು ಅಳಿಯನ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಇಬ್ಬರು ಸಾವು | Suicide

ಬೆಂಗಳೂರು: ಭಾರಿ ಸಾಲದ ಹೊರೆಯಿಂದ ಮನನೊಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು (ಮಾ. 29) ವರದಿಯಾಗಿದೆ.
ಮೃತರನ್ನು ತಾಯಿ ಆಶಾ(55) ಮತ್ತು ಅವರ ಮಗಳು ವರ್ಷಿತಾ(34) ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವರ್ಷಿತಾ ಸಹೋದರ ಮೋಹನ್ ಗೌಡ(32) ಮತ್ತು ಅವರ 11 ವರ್ಷದ ಮಗ ಮಯಾಂಕ್ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೋಹನ್ ತನ್ನ ತಾಯಿ, ಅಕ್ಕ ಹಾಗೂ ಅಳಿಯ ಕತ್ತು ಸೀಳಿ ಬಳಿಕ, ಅದೇ ರೀತಿಯಲ್ಲಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಹಣಕಾಸಿನ ಸಾಲವೇ ಇದಕ್ಕೆ ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋದಿಂದ ತಿಳಿದು ಬಂದಿದ್ದು, ಅದನ್ನು ಸಂಬಂಧಿರಿಗೆ ಕಳುಹಿಸಿದ್ದರು ಎನ್ನಲಾಗಿದೆ. 
ಈ ಕುರಿತು ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಎಸ್​ಪಿ ಚಂದ್ರಕಾಂತ್ ಎಂ.ವಿ, ಘಟನೆಗೆ ಭಾರೀ ಆರ್ಥಿಕ ಸಾಲವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೋಹನ್ ಚಿಟ್ ಫಂಡ್ ವ್ಯವಹಾರಗಳಲ್ಲಿ ಭಾಗಿಯಾಗಿದ್ದು, 5 ಲಕ್ಷದಿಂದ 1 ಕೋಟಿ ರೂ.ವರೆಗೆ ವ್ಯವಹಾರ ನಡೆಸುತ್ತಿದ್ದರು. ಯುಗಾದಿ ಹಬ್ಬದ ಸಮಯದಲ್ಲಿ ಮಾಂಸ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದ ಕಾಲೋಚಿತ ಚಿಟ್ ಯೋಜನೆಗಳನ್ನು ಸಹ ಅವನು ನಡೆಸುತ್ತಿದ್ದನೆಂದು ತಿಳಿದಿ ಬಂದಿದೆ ಎಂದು ಹೇಳಿದ್ದಾರೆ.
ಜೊತೆಗೆ ಅತಿಯಾದ ದುಂದುವೆಚ್ಚದ ಜೀವನಶೈಲಿಯಿಂದ ಸಾಲ ಹೆಚ್ಚಳವಾಗಿದೆ. ಅದನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).