ಬೆಂಗಳೂರು: ಸ್ಟಿಂಗ್ ಆಪರೇಷನ್ ವಿವಾದ ಹಾಗೂ ಫೋನ್ ಟ್ಯಾಪಿಂಗ್ ಆರೋಪದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ), ರಾಜ್ಯದಲ್ಲಿ ಅತ್ಯಂತ ಕೆಟ್ಟ ರಾಜಕೀಯ ಸಂಸ್ಕೃತಿ ಹುಟ್ಟಿಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, ರಾಜ್ಯದಲ್ಲಿ ಅತ್ಯಂತ ಕೆಟ್ಟ ಸಂಸ್ಕೃತಿ ಹುಟ್ಟುಹಾಕಲಾಗುತ್ತಿದ್ದು, ತೀವ್ರ ನೋವಿನಿಂದ ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ನಿನ್ನೆ ದೆಹಲಿ ಪ್ರತಿಭಟನೆ ವೇಳೆ ಸಿಎಂ ಅವರನ್ನು ಎಳೆದು ಹಾಕಿದ ಬಗ್ಗೆ ಮಾತಾಡಲ್ಲ ಆದರೆ, ರಾಜ್ಯದಲ್ಲಿ ಜನರೆ ಸಿಎಂ ಕುರ್ಚಿಯನ್ನು ಎಳೆದು ಹಾಕುವ ಕಾಲ ದೂರವಿಲ್ಲ. ನಾಡಿನ ಜನತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಮುನ್ನೆಲೆಗೆ ಇರೋದು ಸ್ಟಿಂಗ್ ಆಪರೇಷನ್ ಮಾತ್ರ ಎಂದು ಎಚ್ಡಿಕೆ ಟೀಕಿಸಿದರು.
ನಾಡಿನ ದೊರೆ ಪ್ರತಿಭಟನೆಗಾಗಿ ದೆಹಲಿಗೆ ಹೋಗಿದ್ದಾರೆ. ಆದರೆ, ನಮ್ಮ ರಾಜ್ಯದ ರೈತರು ಕೇಂದ್ರ ಸಚಿವರ ಜೊತೆ ಕಬ್ಬಿನ ಬೆಲೆ ವೈಜ್ಞಾನಿಕವಾಗಿ ಕೊಡಬೇಕು ಎಂದು ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬರಗಾಲದ ಸಮಸ್ಯೆ, ಬಿಡದಿ ಟೌನ್ ಶಿಪ್ ಹಾಗೂ ನೈಸ್ ವಿಚಾರಗಳನ್ನೆಲ್ಲಾ ಓವರ್ ಟೇಕ್ ಮಾಡಿ ಸ್ಟಿಂಗ್ ಆಪರೇಷನ್ ಮುನ್ನೆಲೆಗೆ ಬಂದಿದೆ ಎಂದು ಎಚ್ಡಿಕೆ ಕಿಡಿಕಾರಿದರು.
ರಾಜ್ಯದ ಸಿಎಂ ಕ್ಯಾಬಿನೆಟ್ನಲ್ಲಿ ಸ್ಟಿಂಗ್ ಆಪರೇಷನ್ ವಿಷಯ ಪ್ರಸ್ತಾಪ ಮಾಡಿರುವುದು ಮಾಧ್ಯಮದಲ್ಲಿ ಬಂತು. ಅದೇ ವಿಚಾರಕ್ಕೆ ಸಿಎಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಲೇಟೆಸ್ಟ್ ಮಾಹಿತಿ ಕೂಡ ಬಂದಿದೆ. ಸಿಎಂ ಆದ ಬಳಿಕ ಸದಾಶಿವನಗರದಲ್ಲಿ ನಾಲ್ಕು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಸಚಿವ ಸಂಪುಟದ ಸಚಿವರು ಏನೆಲ್ಲಾ ಚರ್ಚೆ ಮಾಡುತ್ತಾರೆ ಎಂಬುದರ ಮಾಹಿತಿ ಪಡೆಯಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯಲ್ಲಿ ಚರ್ಚೆ ಶುರುವಾಗಿದೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸರು ಪ್ರಜ್ವಲ್ ರೇವಣ್ಣರನ್ನು ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದರು ಆದರೆ, ಯಾರೋ ಕರೆ ಮಾಡಿದರು ಅಂತ ವಾಪಸ್ ಕರೆತಂದಿರಿ. ನಮ್ಮ ತಾಯಿಯನ್ನೂ ಬಿಡದೆ ಸೀರಿಸ್ ಆಫ್ ಸ್ಟೋರಿ ಮಾಡಿಸಿದ್ರಿ, ಇದಕ್ಕೆಲ್ಲಾ ಡಿ.ಕೆ. ಶಿವಕುಮಾರ್ ನೇರ ಕಾರಣ. ಏಕೆಂದರೆ, ಅದು ಅವರ ಕಸುಬು ಎಂದು ವಾಗ್ದಾಳಿ ನಡೆಸಿದರು.
ಈ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಸಿಎಂ ( ಸಿದ್ದರಾಮಯ್ಯ) ಆದವರನ್ನೂ ಬಿಡಲಿಲ್ಲವಲ್ಲಾ ನೀನು? ನೀನು ಬೆಳೆಸಿದವರನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರು ಸ್ಟೇ ತೆಗೆದುಕೊಳ್ಳುವಂತೆ ಮಾಡಿದೆ. ನಮ್ಮ ಕುಟುಂಬ ಹಾಗೂ ದೇವೇಗೌಡರು ನಿನ್ನಿಂದ ತುಂಬಾ ನೋವು ಅನುಭವಿಸಿದ್ದೇವೆ. ಈಗ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನೂ ಬಿಡಲಿಲ್ಲವಲ್ಲಾ? ಅವರೂ ಸ್ಟೇ ತೆಗೆದುಕೊಳ್ಳುವಂತೆ ಮಾಡಿದೆ. ಯಾಕೆ ನಿಮ್ಮನ್ನು ಇನ್ನೂ ಸಹಿಸಬೇಕು? ಎಲ್ಲವನ್ನು ಕಾಲ ನಿರ್ಧಾರ ಮಾಡಬೇಕೆಂದು ಹೇಳುತ್ತೀರಿ. ಇನ್ನೂ ಯಾರನ್ನ ಮುಗಿಸಲು ಹೊರಟಿದ್ದೀರಿ? ದುಡ್ಡಲ್ಲೇ ಎಲ್ಲರನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆಲ್ಲ ಇಂದು ಅಂತಿಮ ತೆರೆ ಎಳೆಯಬೇಕು. ನನ್ನ ಅಭಿಪ್ರಾಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಅದರಿಂದ ಸತ್ಯಾಂಶ ಹೊರಗೆ ಬರಬೇಕು. ಇನ್ನೂ ಎಷ್ಟು ಕುಟುಂಬ ಹಾಳಾಗಬೇಕು? ಎಂದು ಎಚ್ಡಿಕೆ ಆಕ್ರೋಶ ಹೊರಹಾಕಿದರು.
ಸ್ಟಿಂಗ್ ಆಪರೇಷನ್ ತನಿಖೆಗಾಗಿ ನಾನು ಡಿಮ್ಯಾಂಡ್ ಮಾಡುತ್ತೇನೆ. ಈ ಸಂಬಂಧ ನಾನು ಕೇಂದ್ರ ಗೃಹಸಚಿವರನ್ನ ಭೇಟಿ ಮಾಡ್ತೇನೆ. ನಮ್ಮ ಕುಟುಂಬ ಇದುವರೆಗೂ ಯಾರ ರಕ್ಷಣೆಗೂ ಕಾದಿಲ್ಲ. ಯಾರೋ ಒಬ್ಬ ಮಂತ್ರಿ ಹೇಳ್ತಾನೆ ನಮ್ಮ ತಾಯಿಗೆ ಇನ್ಕಮ್ ಟ್ಯಾಕ್ಟ್ ನೋಟಿಸ್ ಬಂದಿತು ಮತ್ತು ನನ್ನ ತಾಯಿಯನ್ನು ಉಳಿಸಿಕೊಳ್ಳಲು ಪ್ರಧಾನಿ ಹಾಗೂ ಗೃಹ ಸಚಿವರ ಕಾಲು ಹಿಡಿಯಲು ಹೋಗಿದ್ದೆ ಎಂದು ಹೇಳುತ್ತಾನೆ. ನನ್ನ ಬಳಿಯೇ ಉಂಡು, ತಿಂದು ನನ್ನ ವಿರುದ್ಧವೇ ಮಾತನಾಡುತ್ತಾರೆ. ಪ್ರಜ್ವಲ್ ರೇವಣ್ಣ ಪ್ರಕರಣವಾದಾಗಲೂ ನಾವು ಸ್ಟೇ ತರಲು ಹೋಗಿರಲಿಲ್ಲ. ನಮ್ಮ ಕುಟುಂಬ ಯಾರ ರಕ್ಷಣೆಗೂ ಮುಂದಾಗಿಲ್ಲ ಎಂದು ಎಚ್ಡಿಕೆ ಕಿಡಿಕಾರಿದರು.
ಯಾರೋ ಸಿದ್ದರಾಮಯ್ಯ ಅಂತೆ, ಸ್ಟೇ ಹೋಗಿದ್ದಾರಂತೆ ಅಂತ ಯಾವುದೋ ಟಿವಿಯಲ್ಲಿ ತೋರಿಸಿದರು. ಸಿದ್ದರಾಮಯ್ಯ ಅವರೇ ನಮ್ಮ ಕುಟುಂಬದಲ್ಲಿ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ. ನಿಮ್ಮ ನೋವು ಕೂಡ ನಮಗೆ ಗೊತ್ತಿದೆ. ನೀವು ತನಿಖೆ ಆಗಬೇಕು ಅಂತ ಹೇಳಿದ್ದೀರಿ ಸಿದ್ದರಾಮಣ್ಣ. ನಿಮ್ಮ ಧ್ವನಿ ಹತ್ತಿಕ್ಕುವ ಕೆಲದ ಆಗಿದೆ. ಸದನದಲ್ಲಿ ನಾವಿಬ್ಬರೂ ಪರಸ್ಪರ ಬೈಕೊಂಡಿದ್ದೇವೆ. ಆದರೆ, ಹಿಂದೆ ನೀವು ಕೂಡ ನಮ್ಮೊಂದಿಗೆ ಇದ್ದವರು. ನಮ್ಮ ರಾಜ್ಯದ ಸಂಸ್ಕೃತಿಯನ್ನು ಈಗ ಎಲ್ಲಿಗೆ ತಂದು ನಿಲ್ಲಿಸಿದ್ದಾರೆ. ನಾನೊಬ್ಬನೇ ಹೋರಾಟ ಮಾಡಿದ್ರೆ ಸಾಲಲ್ಲ. ನೀವು ಕೂಡ ಹಿಂದಿನಂತೆ ಧ್ವನಿ ಎತ್ತಬೇಕು ಎಂದು ಸಿದ್ದರಾಮಯ್ಯ ಅವರಿಗೆ ಎಚ್ಡಿಕೆ ಕರೆ ನೀಡಿದರು.
ನನ್ನದೂ ಸೇರಿ ಎಲ್ಲರ ಫೋನ್ ಕೂಡ ಟ್ಯಾಪ್ ಆಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು, 136 ಜನ ಇದ್ದಾರೆ ಸರಕಾರ ಹೇಗೆ ಬೀಳುತ್ತೆ? ನಾವು ಅವರನ್ನು ಕರೆದುಕೊಂಡು ಬಂದು ಅಧಿಕಾರ ಮಾಡಬೇಕಿಲ್ಲ ಎಂದು ಎಚ್ಡಿಕೆ ತಿಳಿಸಿದರು.