ಬೆಂಗಳೂರು: ನಗರದ ಬಸವನಗುಡಿಯ ಎನ್.ಆರ್. ಕಾಲನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾ ಭವನ ಆಡಿಟೋರಿಯಂನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಭಾನುವಾರ(ಸೆ. 27) ಒಂದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರದ ನೂರು ಗಣ್ಯರಿಗೆ ಸನ್ಮಾನ ಮಾಡುವ ಮೂಲಕ ಗುರುವಂದನೆ ಸಲ್ಲಿಸಲಾಗಿದೆ.
'ನಮ್ಮ ಆದ್ಯತೆ' ಟ್ರಸ್ಟ್ ಮತ್ತು ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ ಅವರ ಸಹಯೋಗದಲ್ಲಿ ಆಯೋಜಿಸಿದ್ದ 'ಗುರುವಂದನಾ' ಕಾರ್ಯಕ್ರಮವನ್ನ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಪುಟ್ಟಣ್ಣ, ಹೃದ್ರೋಗ ತಜ್ಞರಾದ ಡಾ.ಸೌಮ್ಯ ಶ್ರೀನಿವಾಸ್ ಉದ್ಘಾಟಿಸಿದರು.
ನಮ್ಮ ಆದ್ಯತೆ ಟ್ರಸ್ಟ್ ಸಂಸ್ಥಾಪಕಿ ಜಾನ್ವಿ ಹೇಮಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಿನಿಮಾ ನಟರಾದ ತಬಲಾ ನಾಣಿ, ಪ್ರಿಯಾಂಕಾ ತಿಮ್ಮೇಶ್, ಕಿರುತೆರೆ ಕಲಾವಿದೆ ಸಿತಾರಾ, ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಮಹಾಂತೇಶ್ ಜಿ. ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿದ್ದು, ಗುರು ಎಂದರೆ ಭಾರ. ತನ್ನ ಶಿಷ್ಯರ ಬದುಕು ರೂಪಿರುವ ಮಹತ್ತರ ಜವಾಬ್ದಾರಿಯನ್ನ ಹೊತ್ತಿರುವ ದೇವರ ರೂಪ. ಶಾಲೆಯಲ್ಲಿ ಅಕ್ಷರ ಕಲಿಸುವವರು ಮಾತ್ರವೇ ಗುರು ಅಲ್ಲ. ಜೀವನದ ಎಲ್ಲ ಹಂತದಲ್ಲಿ ಸನ್ಮಾರ್ಗ ತೋರುವ ಪ್ರತಿಯೊಬ್ಬರು ಗುರು. ಈ ನಿಟ್ಟಿನಲ್ಲಿ ಶಿಕ್ಷಣ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ, ರಾಜಕೀಯ, ಸಮಾಜ ಸೇವೆ ಹೀಗೆ ಹಲವು ಕ್ಷೇತ್ರದ 100 ಮಂದಿಗೆ ಒಂದೇ ವೇದಿಕೆಯಲ್ಲಿ ಗುರುವಂದನೆ ಸಲ್ಲಿಸಿದ್ದು ಕಾರ್ಯಕ್ರಮವನ್ನ ಅರ್ಥಪೂರ್ಣವಾಗಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಹಿರಿಯ ಹೃದ್ರೋಗ ತಜ್ಞರಾದ ಡಾ. ಪವನ್ ಕುಮಾರ್, ಪಿ. ರಾಸಲ್ಕರ್ ಅವರು ಸಭಿಕರೊಂದಿಗೆ ಹೃದಯದ ಕಾಳಜಿ ಕುರಿತು ಸಂವಾದ ನಡೆಸಿದರು. ಕಾರ್ಡಿಯಾಕ್ ಅರೆಸ್ಟ್ ಮತ್ತು ಹೃದಯಾಘಾತ ಎರಡು ಬೇರೆ ಬೇರೆ ಎಂದು ತಿಳಿಸಿದರು. ರಕ್ತನಾಳದ ಬ್ಲಾಕ್ ಆಗುವಿಕೆ ಹೃದಯಾಘಾತ, ಹೃದಯವೇ ಸ್ತಂಭನವಾಗಿದ್ರೆ ಅದು ಕಾರ್ಡಿಯಾಕ್ ಅರೆಸ್ಟ್. ಸುಸ್ತು, ಬೆವರುವಿಕೆ, ಎದೆನೋವು, ಕುತ್ತಿಗೆ ನೊವು, ಬಿಪಿ ಏರುಪೇರು, ಗ್ಯಾಸ್ಟ್ರಿಕ್ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.