ಕೃಷಿ ಸಚಿವ ಎನ್ ಚಲುವರಾಯಸ್ವಾಮಿ 
ರಾಜ್ಯ

ರೈತರನ್ನು ಉದ್ಯಮಿಗಳಾಗಿಸಲು ಸರ್ಕಾರದಿಂದ ಆದ್ಯತೆ-farmers

ಬೆಂಗಳೂರು: ರೈತರನ್ನು ಉದ್ಯಮಿಗಳಾಗಿಸಲು ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೇಲೆ ಹೆಚ್ಚುಗಮನ ಹರಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಕಬ್ಬನ್‌ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಅಗ್ರಿ ವಾಕ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳಿಂದ ಕೃಷಿ ಉತ್ಪಾದನೆ ಹೆಚ್ಚಾಗಿದೆ, ಇದರಿಂದ ನಮ್ಮ ದೇಶವು ಇತರೆ ರಾಷ್ಟ್ರಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿದೆ. ನಮ್ಮ ಮುಂದಿರುವ ಸವಾಲುಗಳು ಕೃಷಿ ಉತ್ಪಾದನೆ ಹೆಚ್ಚಳ ಮಾತ್ರವಲ್ಲದೆ ರೈತರು ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಗೆ ತಲುಪುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಯುವ ರೈತರನ್ನು ಕೃಷಿ ಉದ್ಯಮಿಗಳಾಗಿ ಸಬಲೀಕರಿಸುವುದು ಸರ್ಕಾರದ ನೀತಿ ಚೌಕಟ್ಟಿನ ಪ್ರಮುಖ ಆದ್ಯತಾ ವಿಷಯವಾಗಿದೆ. ಈ ದೃಷ್ಟಿಕೋನದಿಂದ ಫೆ.6ರಿಂದ ಫೆ.8ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ. 3 ದಿನಗಳ ಮೇಳವು ರೈತರಿಗೆ ತಂತ್ರಜ್ಞಾನ, ಬ್ರಾಂಡಿಂಗ್ ಅವಕಾಶಗಳು ಮತ್ತು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ವೇದಿಕೆಯಾಗಲಿದೆ. ರೈತ ಉತ್ಪಾದಕ ಸಂಸ್ಥೆಗಳು ಸೇರಿ 300ಕ್ಕೂ ಅಧಿಕ ಮಳಿಗೆಗಳು ಯಂತ್ರೋಪಕರಣಗಳು, ಸಂಸ್ಕರಣಾ ತಂತ್ರಗಳು ಮತ್ತು ಕೃಷಿ ಮೌಲ್ಯ ಸರಪಳಿಯ ಪ್ರದರ್ಶಿಸಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ಕೃಷಿ ಬೆಲೆ ಆಯೋಗದ ಆಯುಕ್ತ ಅರವಿಂದ ದಳವಾಯಿ, ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ ಸೇರಿ ಮತ್ತಿತರರಿದ್ದರು.