ಕರಾವಳಿ ಪ್ರದೇಶಗಳಲ್ಲಿ ವಾರಪೂರ್ತಿ ಉತ್ತಮ ಮಳೆ
ಬೆಂಗಳೂರು: ಮುಂಗಾರು ದುರ್ಬಲವಾಗಿದ್ದರೂ ಕರಾವಳಿ ಪ್ರದೇಶಗಳಲ್ಲಿ ವಾರಪೂರ್ತಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜತೆಗೆ, ದಕ್ಷಿಣ ಮತ್ತು ಉತ್ತರ ಕರ್ನಾಟಕದ ವ್ಯಾಪ್ತಿಯ ಭಾಗಗಳಲ್ಲಿಯೂ ಜೂ 30ರಿಂದ ಮುಂದಿನ 3 ದಿನ ಬಿರುಸಾಗಿ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 26ರಿಂದ ಜು.2ವರೆಗೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಮತ್ತು ಕಲಬುರಗಿಯಲ್ಲಿ ಜೂ 30ರಿಂದ ಜು.2ವರೆಗೆ ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿಯಲ್ಲಿ ಪ್ರತಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಹಾಗಾಗಿ, ಸಮುದ್ರಕ್ಕೆ ತೆರಳಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು,ಲಘು ಪ್ರಮಾಣದಲ್ಲಿ ಮಳೆಯಾಗಲಿದೆ.
ರಾಜ್ಯದಲ್ಲಿ ಜೂ 1ರಿಂದ ಜೂ 25ವರೆಗೆ ವಾಡಿಕೆಯಂತೆ 159 ಮಿಮೀ ಮಳೆಯಾಗಬೇಕಿತ್ತು. ಆದರೆ, 90 ಮಿಮೀ ಸುರಿದಿದ್ದು, ಶೇ. 43 ಕುಂಠಿತವಾಗಿದೆ. ಕರಾವಳಿಯಲ್ಲಿ ಶೇ.55, ಮಲೆನಾಡಲ್ಲಿ ಶೇ.60, ಉತ್ತರ ಕರ್ನಾಟಕದಲ್ಲಿ ಶೇ.31 ಮತ್ತು ದಕ್ಷಿಣ ಕರ್ನಾಟಕಲ್ಲಿ ಶೇ.5 ಮಳೆ ಅಭಾವವಾಗಿದೆ.