ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿರುವ ಹಿನ್ನಲೆ, ಇಂದು ಸಂಜೆ 6 ಗಂಟೆಯಿಂದ ಜ. 24ರ ಮಧ್ಯರಾತ್ರಿವರೆಗೆ ಕಾಲ್ನಡಿಗೆ & ದ್ವಿ ಚಕ್ರ ವಾಹನದಲ್ಲಿ ಭಕ್ತರು ತೆರಳುವುದನ್ನು ತಾತ್ಕಲಿಕವಾಗಿ ನಿರ್ಬಂಧಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಬುಧವಾರ ಹೊರಡಿಸಿದ ಆದೇಶ ಪ್ರಕಾರ, ಬುಧವಾರ ಬೆಳಗ್ಗೆ ತಾಳುಬೆಟ್ಟದಿಂದ ಮಲೆ ಮಹಾದೇಶ್ವರ ಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪಿನ ಮೇಲೆ ಚಿರತೆಯೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರೂ ಮೃತಪಟ್ಟಿದ್ದಾರೆ.
ಈ ಹಿನ್ನೆಲೆ ಮಲೆ ಮಹಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ದ್ವಿ ಚಕ್ರ ವಾಹನದಲ್ಲಿ ತೆರಳುವ ಭಕ್ತರ ಮೇಲೆ ಚಿರತೆ ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಚಿರತೆಯನ್ನು ಸೆರೆ ಹಿಡಿಯುವ ತನಕ ಪಾದಯಾತ್ರೆ ಹಾಗೂ ದ್ವಿ ಚಕ್ರ ವಾಹನದಲ್ಲಿ ಬೆಟ್ಟಕ್ಕೆ ತೆರಳುವ ಭಕ್ತರನ್ನು ನಿರ್ಬಧಿಸುವಂತೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್ ಅವರು ಕೋರಿದ್ದರು. ಈ ಹಿನ್ನೆಲೆ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ.