ಸಾಂದರ್ಭಿಕ ಚಿತ್ರ 
ರಾಜ್ಯ

ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ | Tungabhadra river

ರಾಯಚೂರು: ಆಂಧ್ರ ಪ್ರದೇಶದ ಕೊಸಗಿ ಮಂಡಲ ಕಂದಕೂರ ಬಳಿ ತುಂಗಭದ್ರಾ ನದಿಯಲ್ಲಿ ಶುಕ್ರವಾರ(ಮಾ. 28) ಸ್ನಾನಕ್ಕೆ ತೆರಳಿದ್ದ ಕರ್ನಾಟಕದ ಮೂಲದ ಒಂದೇ ಕುಟುಂಬದ ನಾಲ್ವರು ನದಿ ಆಳ ತಿಳಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕರ್ನೂಲು ಜಿಲ್ಲೆಯ ಕೊಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೊಳ್ಳಿಬಂಡಾ ಆಣೆಕಟ್ಟಿನ ಕೊನೇ ಭಾಗದ ಬಳಿ ಈ ದುರ್ಘಟನೆ ನಡೆದಿದೆ. ರಾಯಚೂರು ​ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ನಿವಾಸಿಗಳಾದ ಉಮಾವತಿ (35), ರತ್ನಾ (24), ಮಹೇಶ್ (28) ಹಾಗೂ ಶಿವಾನಂದ (24) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಇಡೀ ಗ್ರಾಮವೇ ಈ ಆಘಾತಕಾರಿ ಸುದ್ದಿಯಿಂದ ಕಂಗಾಲಾಗಿದೆ.
ಮಾಹಿತಿ ಪ್ರಕಾರ, ಮಾನ್ವಿಯಿಂದ ಹದಿನೈದು ಜನರ ಗುಂಪು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕಂದುಕೂರು ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ. ವಿವಾಹ ಸಮಾರಂಭಗಳು ಮುಗಿದ ಬಳಿಕ ಬೀಸಲಿನ ಬೇಗೆಯಿಂದ ತಂಪಾಗಳು ಗುಂಪಿನ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ತುಂಗಭದ್ರಾ ನದಿಯನ್ನು ವ್ಯಾಪಿಸಿರುವ ರಾಜೋಲಿಬಂಡ ಆಣೆಕಟ್ಟಿನ ಬಳಿ ಸ್ನಾನ ಮಾಡಲು ಇಳಿದಿದ್ದಾರೆ. ನಾಲ್ವರಲ್ಲಿ ಇಬ್ಬರಿಗೆ ಈಜು ಬರದ ಕಾರಣ ಮುಳುಗಿದ್ದು, ಅವರನ್ನು ಕಾಪಾಡುವಾಗ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಕುರ್ಡಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಘಟನೆ ನಡೆದ ಸ್ಥಳಕ್ಕೆ ಆಂಧ್ರಪ್ರದೇಶದ ಕೋಸಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮೀನುಗಾರರ ಸಹಾಯದಿಂದ ನದಿಯಿಂದ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೋಸಗಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೋಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.