ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

ಚುನಾವಣಾ ಆಯೋಗದಲ್ಲಿನ ಆಂತರಿಕ ಬಿಕ್ಕಟ್ಟು: ಸಿಇಸಿ ಜ್ಞಾನೇಶ್ ಕುಮಾರ್ ವಜಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ!

ಬೆಂಗಳೂರು: ಚುನಾವಣಾ ಆಯೋಗದೊಳಗಿನ ಇತ್ತೀಚಿನ ಆಂತರಿಕ ಬೆಳವಣಿಗೆಗಳು ದೇಶದ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯನ್ನೂ ಆತಂಕಕ್ಕೀಡು ಮಾಡುವಂತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಚುನಾವಣಾ ಆಯೋಗದೊಳಗಿನ ಇತ್ತೀಚಿನ ಆಂತರಿಕ ಬೆಳವಣಿಗೆಗಳು ದೇಶದ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯನ್ನೂ ಆತಂಕಕ್ಕೀಡು ಮಾಡುವಂತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಸಾಂವಿಧಾನಿಕ ಸಂಸ್ಥೆಯ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂಗ್ಲಿಷ್ ವೃತ್ತಪತ್ರಿಕೆಯೊಂದರ ತನಿಖಾ ವರದಿಯನ್ನು ಉಲ್ಲೇಖಿಸಿರುವ ಮಾಜಿ ಸಿಎಂ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿ, ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಹಾಗೂ ಕ್ರಮಗಳ ವಿರುದ್ಧ ಲಿಖಿತ ಆಕ್ಷೇಪ ದಾಖಲಿಸಿದ್ದಾರೆ. ಇವು ಕೇವಲ ಸಾಮಾನ್ಯ ಭಿನ್ನಾಭಿಪ್ರಾಯಗಳಲ್ಲ, ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳ ಸೇರ್ಪಡೆ ಹಾಗೂ ತೆಗೆದುಹಾಕುವಿಕೆ, ಚುನಾವಣಾ ಪಟ್ಟಿಯ ಡೇಟಾಬೇಸ್‌ನ ನಿಯಂತ್ರಣ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದ ಅತ್ಯಂತ ಗಂಭೀರ ವಿಚಾರಗಳಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!...ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗದ ಮೂಲಗಳು! | Election Commission

ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್​-6 ನಲ್ಲಿ ನಿಯಮಬದ್ಧ ಬದಲಾವಣೆ ಮಾಡದೆ ಹೊಸ ಪ್ರಶ್ನೆಯನ್ನು ಸೇರಿಸಿರುವುದನ್ನು ಆಯುಕ್ತರೊಬ್ಬರು ಅನಧಿಕೃತ ಮತ್ತು ಕಾನೂನುಬಾಹಿರ (unauthorised and illegal) ಎಂದು ವರದಿ ಹೇಳಿದೆ. ಅಷ್ಟೇ ಅಲ್ಲದೆ, ಚುನಾವಣಾ ಪಟ್ಟಿಯ ಡೇಟಾಬೇಸ್ ಕ್ರಮೇಣ ಕೇಂದ್ರೀಕೃತವಾಗುತ್ತಿರುವುದು ಮತ್ತು ಕಾನೂನಿನ ಪ್ರಕಾರ ಅಧಿಕಾರ ಹೊಂದಿರುವ ಸ್ಥಳೀಯ ಚುನಾವಣಾಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸುತ್ತಿರುವುದರ ಕುರಿತು ಆಂತರಿಕವಾಗಿ ಗಂಭೀರ ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಂತಹ ಸೂಕ್ಷ್ಮ ವ್ಯವಸ್ಥೆಯ ನಿಯಂತ್ರಣ ಯಾರ ಕೈಯಲ್ಲಿದೆ, ಯಾವ ಅಧಿಕಾರದಡಿ ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಪ್ರವೇಶ ಏಕೆ ನೀಡಿಲ್ಲ ಎಂಬ ಪ್ರಶ್ನೆಗಳಿಗೆ ಆಯೋಗ ಸ್ಪಷ್ಟ ಉತ್ತರ ನೀಡಬೇಕಿದೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ದುರ್ಬಳಕೆ!...

ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆಯಲ್ಲಿ, ನ್ಯಾಯಾಂಗ ಅಧಿಕಾರಿಗಳು ಮತದಾರರನ್ನು ಪಟ್ಟಿಗೆ ಸೇರಿಸಿದ ನಂತರ ಅವರ ಸೇರ್ಪಡೆಯನ್ನು ರದ್ದುಮಾಡಲು 16 ಲಕ್ಷ ಮೇಲ್ಮನವಿಗಳನ್ನು ಯಾರ ಅನುಮತಿಯ ಮೇರೆಗೆ ಸಲ್ಲಿಸಲಾಯಿತು ಎಂದು ಆಯುಕ್ತ ಸುಖಬೀರ್ ಸಿಂಗ್ ಸಂಧು ಅವರೇ ಪ್ರಶ್ನಿಸಿದ್ದಾರೆ. ತಾವು, ಮತ್ತೊಬ್ಬ ಆಯುಕ್ತರು ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯೂ ಈ ಪ್ರಕ್ರಿಯೆಯ ಆಧಾರದ ಬಗ್ಗೆ ಮಾಹಿತಿ ಹೊಂದಿರಲಿಲ್ಲ ಎಂಬುದು ವರದಿಯಿಂದ ಬಹಿರಂಗವಾಗಿದೆ. ಸಾಲದಾಗಿ, ತಮ್ಮ ಅನುಮತಿಯಿಲ್ಲದೆ ಆಯೋಗದ ಹೆಸರಿನಲ್ಲಿ ಸಂವಹನ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ಆಕ್ಷೇಪಿಸಿದ್ದು, ಆಯೋಗವು ಒಬ್ಬ ವ್ಯಕ್ತಿಯ ನಿರ್ಧಾರಕ್ಕೆ ಸೀಮಿತವಾಗದೆ ಸಾಂಸ್ಥಿಕವಾಗಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.

ಮತದಾನದ ಹಕ್ಕನ್ನು ಕಸಿದುಕೊಂಡಂತೆ

ನಿಷ್ಪಕ್ಷಪಾತ ಮತ್ತು ಪಾರದರ್ಶಕ ಮತದಾನವೇ ಭಾರತದ ಪ್ರಜಾಪ್ರಭುತ್ವದ ಆತ್ಮವಾಗಿದ್ದು, ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನ ಹೆಸರನ್ನು ಅನ್ಯಾಯವಾಗಿ ತೆಗೆದುಹಾಕಿದರೂ ಅದು ಅವನ ಸಾಂವಿಧಾನಿಕ ಮತದಾನದ ಹಕ್ಕನ್ನು ಕಸಿದುಕೊಂಡಂತೆ. ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಬದಲಾಗುತ್ತಿದೆ ಎಂಬ ಅನುಮಾನ ಮೂಡದಂತೆ ಆಯೋಗದ ಸ್ವಾಯತ್ತತೆಯನ್ನು ಕಾಪಾಡಬೇಕಿದೆ. ಆಯೋಗದ ಇಬ್ಬರು ಸದಸ್ಯರೇ ಪದೇಪದೇ ಆಕ್ಷೇಪ ಎತ್ತುತ್ತಿರುವುದು ದೇಶದ ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಹಾಗೂ ಕಾರ್ಯವೈಖರಿಯಿಂದ ಮತದಾನದ ಸಾಂವಿಧಾನಿಕ ಹಕ್ಕಿಗೆ ತೀವ್ರ ಚ್ಯುತಿ ಬಂದಿದ್ದು, ಇಂತಹ ಅಧಿಕಾರಿಗಳಿಂದ ದೇಶದಲ್ಲಿ ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ರಕ್ಷಕರಾಗಿರುವ ಮಾನ್ಯ ರಾಷ್ಟ್ರಪತಿಗಳು, ಸಾಂವಿಧಾನಿಕ ದ್ರೋಹ ಎಸಗಿರುವ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ಪದಚ್ಯುತಗೊಳಿಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.