ಕರ್ತವ್ಯ ಆ್ಯಪ್’ಗೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ
ಬೆಂಗಳೂರು: ಸರ್ಕಾರಿ ಕೆಲಸಕ್ಕೆ ಗೈರಾಗುವವರನ್ನು ನಿಯಂತ್ರಿಸುವ ಉದ್ದೇಶದಿಂದ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಆನ್‌ಲೈನ್ ಹಾಜರಾತಿ ದಾಖಲಿಸುವ ‘ಕರ್ತವ್ಯ ಆ್ಯಪ್’ಗೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸರ್ಕಾರದ ಅಧೀನದ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಮೊಬೈಲ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮೇ 1 ಜಾರಿಗೆ ಬಂದಿದೆ. ಅದರನ್ವಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬಂದಾಗ ಚೆಕ್‌ಇನ್‌ನಲ್ಲಿ ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ ಚೆಕ್‌ಔಟ್‌ನಲ್ಲಿ ತಪ್ಪದೆ ಹಾಜರಾತಿ ದಾಖಲಿಸಬೇಕು. ಆದರೆ, ಹೊಸ ವ್ಯವಸ್ಥೆಗೆ ಮೊದಲು ಪೊಲೀಸ್ ಇಲಾಖೆಯಿಂದ ಅಪಸ್ವರ ವ್ಯಕ್ತವಾಯಿತು. ಇದೀಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಅಬಕಾರಿ ಸೇರಿ ಇತರ ಇಲಾಖೆಗಳ ನೌಕರರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಕರ್ತವ್ಯ ಆ್ಯಪ್’ಗೆ ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರಿಂದಲೂ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲೂ ವಾರದ ಕವಾಯಿತು (ಪೆರೇಡ್ ) ಇರಲಿದೆ. ಬೆಳಗ್ಗೆ 7 ಗಂಟೆಗೆ ಪರೇಡ್ ಇರುವುದರಿಂದ ಕಚೇರಿಗೆ ತೆರಳಿ ಆನ್‌ಲೈನ್ ಹಾಜರಾತಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮದ್ಯದಂಗಡಿಗಳು ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆವರೆಗೆ ಹಾಗೂ ಬೆಂಗಳೂರು ನಗರದಲ್ಲಿ ರಾತ್ರಿ 1ಗಂಟೆವರೆಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ತವ್ಯ ಆ್ಯಪ್‌ನಲ್ಲಿ ಸಂಜೆ 5.30ಕ್ಕೆ ಚೆಕ್‌ಔಟ್‌ನಲ್ಲಿ ಹಾಜರಾತಿ ಹಾಕಿ ಮನೆಗೆ ತೆರಳಿದರೆ ನಂತರ ನಡೆಯುವ ಅಬಕಾರಿ ಅಪರಾಧಗಳಿಗೆ ಹೊಣೆ ಯಾರಾಗಲಿದ್ದಾರೆ. ಪೊಲೀಸ್, ಕಾರಾಗೃಹ, ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯಂತೆ ಅಬಕಾರಿ ಇಲಾಖೆಯನ್ನು ‘ಅಗತ್ಯ’ ಇಲಾಖೆಯೆಂದು ಘೋಷಿಸಬೇಕು.
‘ನಿಗದಿತ ಪಾಳಿ’ ನಿಗದಿಪಡಿಸಬೇಕು.ಸಂಜೆ ಹಾಜರಾತಿ ಹಾಕಿದ ಬಳಿಕ ಕೆಲಸ ಮಾಡಬೇಕಾ ಅಥವಾ ಬೇಡ ಎಂಬ ಗೊಂದಲ ಇದೆ.ಇದನ್ನು ಸರಿಪಡಿಸಬೇಕು. ಸಂಜೆ 7 ಗಂಟೆ ಬಳಿಕ ಅಬಕಾರಿ ಕೇಸ್‌ಗಳು ಹೆಚ್ಚು ಸಂಭವಿಸುತ್ತದೆ. ಹಾಗಾಗಿ, ಇದನ್ನು ತಡೆಯಲು ತಪಾಸಣೆ ಮಾಡಬೇಕಾಗುತ್ತದೆ. ದಿನದ 24 ಗಂಟೆಯಲ್ಲೂ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಅಧಿಕ ಕಾರ್ಯದೊತ್ತಡದಿಂದ ಅಧಿಕಾರಿಗಳು ಮಾನಸಿಕ ಸಮಸ್ಯೆಗೆಗಳಿಗೆ ಒಳಗಾಗಲಿದ್ದಾರೆ. ಕುಟುಂಬದವರಿಗೆ ಸಮಯ ನೀಡಲು ಆಗುವುದಿಲ್ಲ. ಇಂತಹ ಹಲವು ಸಮಸ್ಯೆಗಳಿವೆ. ಹಾಗಾಗಿ, ಅವೈಜ್ಞಾನಿಕ ಕರ್ತವ್ಯ ಆ್ಯಪ್ ಪದ್ಧತಿಯನ್ನು ತಕ್ಷಣ ಕೈಬಿಡಬೇಕೆಂದು ಎಂದು ಅಬಕಾರಿ ನೌಕರರು ಅಳಲು ತೋಡಿಕೊಂಡಿದ್ದಾರೆ.