ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ ಹಲವೆಡೆ ಜಾರಿ ನಿರ್ದೇಶನಾಲಯ ದಾಳಿ
- ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ ಹಲವೆಡೆ ಜಾರಿ ನಿರ್ದೇಶನಾಲಯ ದಾಳಿ!
- ಸಚಿವ ಸತೀಶ್ ಜಾರಕಿಹೊಳಿ ಸಹೋದರಿ ಪತಿ ವೈ. ಮಂಜುನಾಥ್
- ಇದೊಂದು ರಾಜಕೀಯ ಪ್ರೇರಿತ ಎಂದ ಪ್ರಿಯಾಂಕ್ ಖರ್ಗೆ
- ಉಪ್ಪು ತಿಂದವರು ನೀರು ಕುಡಿಯುತ್ತಾರೆ: ಆರ್.ಬಿ.ತಿಮ್ಮಾಪುರ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಬಕಾರಿ ಹೆಚ್ಚುವರಿ ಆಯುಕ್ತ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿ ವೈ. ಮಂಜುನಾಥ (ED Raid on Y Manjunath) ಅವರ ನಿವಾಸ ಸೇರಿ ಹಲವೆಡೆ ಜಾರಿ ನಿರ್ದೇಶನಾಲಯ (ED) ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಬಿಜೆಪಿ ಮಾಜಿ ಎಂಪಿ ದೇವೇಂದ್ರಪ್ಪ ಅವರ ಪುತ್ರನಾಗಿರುವ ವೈ. ಮಂಜುನಾಥ ಅವರ ಬೆಂಗಳೂರಿನಲ್ಲಿರುವ ಅಪಾರ್ಟ್ಮೆಂಟ್ ಸೇರಿ ಬೆಳಗಾವಿ, ಮೈಸೂರು ಹಾಗೂ ಹಾಸನದ ಅರಸೀಕೆರೆಯಲ್ಲಿರುವ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಬೇನಾಮಿ ಹೆಸರಿನಲ್ಲಿ ಜಮೀನು, ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಅಕ್ರಮ ಆಸ್ತಿ ಸಂಪಾದನೆ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದ್ದು, ಸದ್ಯ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಸ್ನೇಹಿತರ ಮನೆ ಮೇಲೆ ರೈಡ್!
ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿದ್ದ ಹಿನ್ನಲೆ ತುಮಕೂರು ಅಬಕಾರಿ ಎಸ್ಪಿ ಸತೀಶ್ ಕಾಗಲಿ ಅವರ ಬೆಳಗಾವಿ ಮನೆ ಮೇಲೆ ಸಹ ಇಡಿ ರೈಡ್ ಮಾಡಿದೆ. ಹಾಗೆಯೇ ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ವಿಶ್ವನಾಥ ಗಾಣಿಗೆರ್ ಅವರ ಮನೆ ಮೇಲೆ ಕೂಡ ದಾಳಿ ನಡೆದಿದೆ.
ಉಪ್ಪು ತಿಂದವರು ನೀರು ಕುಡಿಯುತ್ತಾರೆ: ತಿಮ್ಮಾಪುರ
ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಮೇಲೆ ನಡೆದಿರುವ ಇಡಿ ದಾಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಸಾಕಷ್ಟು ಅಧಿಕಾರಿಗಳು ನನ್ನ ಕೆಳಗೆ ಕೆಲಸ ಮಾಡಿದ್ದಾರೆ, ಆದರೆ ಈ ದಾಳಿ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಹಿಂದೆ ಮಂಜುನಾಥ್ ಮೇಲೆ ಒಂದೆರಡು ಬಾರಿ ತನಿಖೆ ಆಗಿತ್ತು, ಆದರೆ ಹವಾಲಾ ಬಗ್ಗೆ ನನಗೇನು ಗೊತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದಿದ್ದಾರೆ.
ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆ: ಪ್ರಿಯಾಂಕ ಖರ್ಗೆ
ಅಬಕಾರಿ ಆಯುಕ್ತ ವೈ. ಮಂಜುನಾಥ ಮೇಲಿನ ದಾಳಿ ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನಮ್ಮ ಮೇಲೆ ಇಲ್ಲಿವರೆಗೆ ಸಾವಿರಾರು ದಾಳಿಗಳು ನಡೆದಿದೆ, ಆದರೆ ಸಾಬೀತಾಗಿದ್ದು ಕಡಿಮೆ, ಅದೇ ರೀತಿ ಶಿಕ್ಷೆಯಾಗಿದ್ದು ಕಡಿಮೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಮೇಲೆ ಇನ್ನೂ ಹೆಚ್ಚಿನ ದಾಳಿಗಳು ನಡೆಯಬಹುದು. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ, ಯಾವಾಗ ಬೇಕೋ ಆವಾಗ ಛೂ ಬಿಡುತ್ತಾರೆ. ನಮ್ಮ ಮೇಲೆ ಸಹ ಯಾವಾಗ ಬೇಕಾದರೂ ದಾಳಿ ನಡೆಯಲಿದೆ ಎಂದಿದ್ದಾರೆ.