ರಾಜ್ಯ ದಲಿತ ಸಂಘಟನೆಗಳ ಪ್ರತಿಭಟನೆ 
ರಾಜ್ಯ

ದಲಿತರ ಕಡೆಗಣಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿ: ಕಾಂಗ್ರೆಸ್‌ಗೆ ದಲಿತ ಸಂಘಟನೆಗಳ ಎಚ್ಚರಿಕೆ -Dalita organizations warn Congress

ಬೆಂಗಳೂರು: ದಲಿತ ಸಮುದಾಯದ ರಾಜಕೀಯ ನಾಯಕರ ಕಡೆಗಣನೆಯನ್ನು ಖಂಡಿಸಿ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಸಾವಿರಾರು ಜನರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸಿ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಶೋಷಿತರ ಸ್ವಾಭಿಮಾನದ ಹೋರಾಟ’ ಎಂಬ ಹೆಸರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಟನೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ದಲಿತ ಸಂಘಟನೆಗಳ ಹತ್ತಾರು ಮುಖಂಡರು ಮತ್ತು ಛಲವಾದಿ ಮಹಾಸಭಾದ ಪದಾಧಿಕಾರಿಗಳು ಶಾಸಕ ಎಚ್.ಸಿ. ಮಹದೇವಪ್ಪ ಅವರ ಭಾವಚಿತ್ರ ಪ್ರದರ್ಶಿಸಿ, ತಮ್ಮ ನಾಯಕನಿಗೆ ಸಿಎಂ ಹುದ್ದೆ ನೀಡುವಂತೆ ಒತ್ತಾಯಿಸಿದರು.
ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಅನುಭವಿ ದಲಿತ ನಾಯಕರ ಕೊರತೆ ಇಂದು ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುತ್ತಿದೆ. ದಶಕಗಳಿಂದ ಕಾಂಗ್ರೆಸ್‌ಗೆ ಮತ ಹಾಕುತ್ತ ಬಂದಿರುವ ದಲಿತ ಸಮುದಾಯಕ್ಕೆ ವಂಚನೆ ಮಾಡಲಾಗುತ್ತಿದೆ. ಉನ್ನತ ಹುದ್ದೆಗಳ ಆಮಿಷವೊಡ್ಡಿ ಪ್ರಭಾವಿ ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಮಂತ್ರಿ ಸ್ಥಾನ ಬೇಡ. ಸಿಎಂ ಸ್ಥಾನ ಬೇಕು. ದಲಿತರಿಗೆ ಪ್ರಾತಿನಿಧ್ಯ ಸಿಗದಿದ್ದರೆ ರಕ್ತಕ್ರಾಂತಿ ಆಗುತ್ತದೆ ಎಂದು ಆರ್‌ಪಿಐ (ಬಿ) ರಾಷ್ಟ್ರೀಯ ಅಧ್ಯಕ್ಷ ಡಾ. ಎನ್. ಮೂರ್ತಿ ಎಚ್ಚರಿಕೆ ನೀಡಿದರು.
10 ಲಕ್ಷ ಜನರ ಸೇರಿಸಿ ಪ್ರತಿಭಟನೆ
ಹಳೆಯ ಮೈಸೂರು ಸೇರಿ ರಾಜ್ಯಾದ್ಯಂತ ದಲಿತ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಹಿರಿಯ ಶಾಸಕ ಎಚ್.ಸಿ.ಮಹದೇವಪ್ಪನವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು. ಸಮುದಾಯದ ನಾಯಕತ್ವ ನಾಶವಾದರೆ ಇಡೀ ಸಮುದಾಯವೇ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ 10 ಲಕ್ಷ ಜನರನ್ನು ಸೇರಿಸಿ ಇದೇ ಫ್ರೀಡಂ ಪಾರ್ಕ್‌ನಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಸಿ. ಸಿದ್ಧಲಿಂಗಯ್ಯ, ರಾಜ್ಯ ಆದಿಜಾಂಬವ ಸಂಘದ ಕಾರ್ಯಾಧ್ಯಕ್ಷ ಜಂಬೂದೀಪ ಸಿದ್ದರಾಜು, ಶ್ರೀ ಕಲ್ಯಾಣಸಿರಿ ಬಂತೇಜಿ, ಶ್ರೀ ಸಿದ್ಧರಾಮ ಶಿವಯೋಗಿ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷತ್ತೋಮ್, ಡಿಎಸ್‌ಎಸ್ ಮುಖಂಡ ಡಿ.ಜಿ. ಸಾಗರ್ ಸೇರಿ ಇತರ ಮುಖಂಡರಿದ್ದರು.