ಆಹಾರ ಸಚಿವ ಕೆ.ಎಚ್. ಮುನಿಯಪ್ಪ  
ರಾಜ್ಯ

ವಾಣಿಜ್ಯ ಬಳಕೆಗೆ ನಿತ್ಯ 9,544 ಸಿಲಿಂಡರ್ ಪೂರೈಕೆ:ಸಚಿವ ಮುನಿಯಪ್ಪ ಹೇಳಿಕೆ

ಬೆಂಗಳೂರು: ಅಗತ್ಯ ಸೇವೆಗಳಡಿ ರಾಜ್ಯದಲ್ಲಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 9,544 ಎಲ್ಪಿಜಿ ಸಿಲಿಂಡರ್ ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಿಲ್ಲ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಎಲ್ಪಿಜಿ ಸಿಲಿಂಡರ್ ಸಮಸ್ಯೆ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ರ್ಕಾೆರೇಷನ್ ಲಿ.ನ( ಬಿಪಿಸಿಎಲ್) ಹಾಗೂ ಗೇಲ್‌ನ ಅಧಿಕಾರಿಗಳ ಕುರಿತು ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಐದು ಹಂತಗಳಲ್ಲಿ ಸಿಲಿಂಡರ್ ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ವಿದ್ಯಾರ್ಥಿನಿಲಯ ಮತ್ತು ಆಸ್ಪತ್ರೆಗಳಿಗೆ ಪ್ರತಿನಿತ್ಯ 4,200, ಇಂದಿರಾ ಕ್ಯಾಂಟೀನ್, ರೈಲ್ವೆ, ಬಸ್ ನಿಲ್ದಾಣಗಳು, ನಂದಿನಿ, ಸರ್ಕಾರಿ ಸಂಸ್ಥೆಗಳಿಗೆ 1,200 ಮತ್ತು ರೆಸ್ಟೋರೆಂಟ್, ಡಾಬಾ, ಹೋಟೆಲ್​ಗಳಿಗೆ 1000 ಸಿಲಿಂಡರ್ ಪೂರೈಕೆ ಮಾಡಲಾಗುವುದು. ಕೃಷಿ ಫಾರ್ಮಾ, ಮೀನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ಕಾರ್ಪೋರೇಟ್ ಕ್ಯಾಂಟೀನ್‌ಗೆ 500, ಇತರ ವರ್ಗಕ್ಕೆ 100 ಸಿಲಿಂಡರ್ ಪೂರೈಕೆಗೆ ಸರ್ಕಾರ ತೀರ್ಮಾನಿಸಿದೆ. ಪ್ರತಿದಿನಕ್ಕೆ 44 ಸಾವಿರ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೇಕಿತ್ತು. ಆದರೆ 9,544 ಸಿಲಿಂಡರ್ ನೀಡಲಾಗುತ್ತದೆ.
ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ರವಿಕುಮಾರ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೋಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ ಮತ್ತಿತರರಿದ್ದರು.
ಮುಂದಿನ ವಾರದಿಂದ ಸುಧಾರಣೆ
ಸಿಲಿಂಡರ್ ಸಮಸ್ಯೆ ಕುರಿತು ಸಿಎಂ ಸಿದ್ದರಾಮಯ್ಯ 2ನೇ ಬಾರಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು. ತೈಲ ಕಂಪನಿಗಳ ಮುಖ್ಯಸ್ಥರ ಜತೆ ಸಭೆ ಮಾಡಿದ್ದೇವೆ. ತೈಲ ಹಡಗುಗಳು ಭಾರತದತ್ತ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಪರಿಸ್ಥಿತಿ ಸುಧಾರಿಸುವ ಆಶಾಭಾವ ಇದೆ. ರಾಜ್ಯದಲ್ಲಿ ಅಡುಗೆ ಅನಿಲ ವಿತರಣೆಯಲ್ಲಿ ಸಮಸ್ಯೆ ಇಲ್ಲ. ಪರಿಸ್ಥಿತಿ ಗಂಭೀರವಿದ್ದಾಗ ಮಿತವ್ಯಯ ಮಾಡಬೇಕು ಎಂದು ಸಚಿವ ಮುನಿಯಪ್ಪ ಹೇಳಿದರು.
ಸಚಿವರು ಹೇಳಿದ್ದು
* ರಾಜ್ಯದಲ್ಲಿ ದಿನಕ್ಕೆ 850 ಮೆಟ್ರಿಕ್ ಟನ್ ಎಲ್ಪಿಜಿ ಅಗತ್ಯ
* ಸದ್ಯಕ್ಕೆ 181.34 ಮೆ.ಟನ್ ಪೂರೈಕೆ
* ಇದರಲ್ಲಿ 48.34 ಮೆ.ಟನ್ ಆಟೋ ಎಲ್ಪಿಜಿ ಪೂರೈಕೆ
* ದಿನಕ್ಕೆ 9,544 ಕಮರ್ಷಿಯಲ್ ಸಿಲಿಂಡರ್ ಮಾತ್ರ ಪೂರೈಕೆ
* ಇಂಡಿಯನ್ ಆಯಲ್​​​ನಿಂದ 2 ಸಾವಿರ, ಭಾರತ್ ಪೆಟ್ರೋಲಿಯಂನಿಂದ 2,500,
ಹಿಂದೂಸ್ತಾನ್ ಪೆಟ್ರೋಲಿಯಂನಿಂದ 2500 ಸಿಲಿಂಡರ್ ಸರಬರಾಜು
* ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳಿಗೆ ಶೇ.100 ಗ್ಯಾಸ್ ಒದಗಿಸಲಾಗುತ್ತಿದೆ
* ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ , ನಗರ ಪ್ರದೇಶಗಳಲ್ಲಿ 28 ದಿನಕ್ಕೆ ಒಂದು ಸಿಲಿಂಡರ್ ವಿತರಣೆ
* ಸಿಲಿಂಡರ್ ಸಮಸ್ಯೆ ಕುರಿತು ಕೇಂದ್ರದೊಂದಿಗೆ ರಾಜಕೀಯ ಸಂಘರ್ಷ ಇಲ್ಲ