Anant Nag | ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗೌರವ!...ಗಣ್ಯರಿಂದ ಅಭಿನಂದನೆಗಳ ಮಹಾಪೂರ 
ರಾಜ್ಯ

ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗೌರವ!...ಗಣ್ಯರಿಂದ ಅಭಿನಂದನೆಗಳ ಮಹಾಪೂರ | Anant Nag

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಅನಂತ್ ನಾಗ್ (Anant Nag) ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿದ್ದು, ಈ ಕುರಿತು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ (PIB) ಬುಧವಾರ (ಸೆ. 16) ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಇದೇ ತಿಂಗಳು ಗುಜರಾತ್‌ನಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ಐತಿಹಾಸಿಕ ಸಾಧನೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಲಾಜಗತ್ತಿಗೆ ಸಂದ ಮನ್ನಣೆ: ಸಿಎಂ ಡಿಕೆಶಿ

ಅನಂತ್ ನಾಗ್ ಅವರಿಗೆ ಶುಭಾಶಯ ಕೋರಿರುವ ಸಿಎಂ ಡಿ ಕೆ ಶಿವಕುಮಾರ್, ತಮ್ಮ ನೈಜ ನಟನೆ, ಸಂಯಮ ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಭಾರತೀಯ ಕಲಾರಂಗವನ್ನು ಶ್ರೀಮಂತಗೊಳಿಸಿದ ಅನಂತ್ ನಾಗ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮಹಾನ್ ಮನ್ನಣೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಭುವನೇಶ್ವರಿ ಕಿರೀಟಕ್ಕೆ ಮತ್ತೊಂದು ಗರಿ: ಕೇಂದ್ರ ಸಚಿವ ಎಚ್​​ಡಿಕೆ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸಹ ಶುಭಾಶಯ ತಿಳಿಸಿದ್ದು, 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡನಾಡಿನ ಹೆಮ್ಮೆಯ ನಟರಾದ ಅನಂತ್ ನಾಗ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು ಹಾಗೂ ಸಹಜ ಅಭಿನಯ ಮತ್ತು ಅಭಿವ್ಯಕ್ತಿಗೆ ಮತ್ತೊಂದು ಹೆಸರು. ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಪ್ರತಿಭೆಯಾಗಿರುವ ಅವರಿಗೆ ಈ ಗೌರವ ಸಂದಿರುವುದು ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿ. ವರನಟ ಡಾ. ರಾಜ್‌ಕುಮಾರ್ ಅವರ ನಂತರ ಕನ್ನಡ ಭುವನೇಶ್ವರಿಯ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಮುಡಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಕನ್ನಡ ಚಿತ್ರರಂಗಕ್ಕೆ ಹಾಗೂ ನಾಡಿಗೆ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ.
ಪಾತ್ರಗಳಿಗೆ ಸಾಟಿಯಿಲ್ಲದ ನೈಜತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡು ಶುಭಹಾರೈಸಿದ್ದಾರೆ. ಭಾರತೀಯ ಸಿನಿರಂಗದ ಧ್ರುವತಾರೆ, ಕನ್ನಡಿಗರ ನೆಚ್ಚಿನ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಒಲಿದಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಕ್ಷಣ. ಬೆಳ್ಳಿತೆರೆಯ ಮೇಲೆ ಅಪಾರ ವೈವಿಧ್ಯಮಯ ಪಾತ್ರಗಳಿಗೆ ಸಾಟಿಯಿಲ್ಲದ ನೈಜತೆ ಹಾಗೂ ಅಪರೂಪದ ಗಾಂಭೀರ್ಯವನ್ನು ತಂದುಕೊಟ್ಟ ಮಹಾನ್ ಕಲಾಚೇತನ ಅವರದ್ದು. ಅವರ ಪ್ರತಿಯೊಂದು ನಟನೆಯೂ ಭಾವನೆಗಳ ಅದ್ಭುತ ಕಾವ್ಯ. ಕನ್ನಡದ ಹಿರಿಮೆ-ಗರಿಮೆಯನ್ನು ದೇಶಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಿದ ಈ ಮಹಾನ್ ಶ್ರೇಷ್ಠ ಕಲಾವಿದನಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಕನ್ನಡಿಗರಿಗೆ ಹೆಮ್ಮೆಯ ಸಂಗತಿ: ಬಿ ವೈ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಶುಭಕೋರಿದ್ದು, ಅನಂತ್ ನಾಗ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು ಹಾಗೂ ಸಹಜ ಅಭಿನಯ, ಅಭಿವ್ಯಕ್ತಿಗೆ ಮತ್ತೊಂದು ಹೆಸರು. ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಪ್ರತಿಭೆಯಾಗಿರುವ ಅವರಿಗೆ ಈ ದಾದಾಸಾಹೇಬ್ ಫಾಲ್ಕೆ ಗೌರವ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವರನಟ ಡಾ. ರಾಜ್‌ಕುಮಾರ್ ಅವರ ನಂತರ ಕನ್ನಡ ಭುವನೇಶ್ವರಿಯ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಮುಡಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ಹಲವು ದಶಕಗಳಿಂದ ಅವರ ಅಭಿನಯ, ಬಹುಮುಖ ಪ್ರತಿಭೆ ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಗುರುತಾಗಿದೆ. ಅವರು ನಿರ್ವಹಿಸಿದ ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಈ ಪ್ರಶಸ್ತಿ ಅವರಿಗೆ ಘೋಷಣೆಯಾಗಿದ್ದು ಒಬ್ಬ ವಿಶಿಷ್ಟ ಕಲಾವಿದನಿಗೆ ಸಿಕ್ಕ ನಿಜವಾದ ಗೌರವವಾಗಿದೆ. ಅವರಿಂದ ಇನ್ನೂ ಹತ್ತು ಹಲವು ಚಿತ್ರಗಳು ಮೂಡಿ ಬರಲಿ ಎಂದು ವಿಜಯೇಂದ್ರ ಆಶಿಸಿದ್ದಾರೆ.