ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಬೆಂಗಳೂರು: ಗುರುವಾರ(ಜೂ. 18) ವಿಧಾನಸಭೆಯಿಂದ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಐದನೇ ಅಭ್ಯರ್ಥಿಗೆ ಗಲುವಿಗೆ ಕಾರಣವಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡಮತದಾನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ಪ್ರತಿಕ್ರಿಯಿಸಿದ್ದು, ಅಡ್ಡ ಮತದಾನದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ವರದಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ(ಜೂ. 19) ತಮ್ಮ ನಿವಾಸದ ಬಳಿ ಮಾತನಾಡಿರುವ ಅವರು, ಅಡ್ಡ ಮತದಾನದ ಬಗ್ಗೆ ರವಿಕುಮಾರ್, ನವೀನ್ ಅವರಿಂದ ಸಂಜೆ ವೇಳೆಗೆ ವರದಿ ಪಡೆದು ದೆಹಲಿಗೆ ಕಳುಹಿಸಲು ಸಿದ್ದತೆ ನಡೆಯುತ್ತಿದೆ. ನಿತಿನ್ ನವೀನ್ ಅವರ ಬಳಿ ಭೇಟಿಗೆ ಸಮಯ ಕೋರಿದ್ದು, ಅವರಿಗೆ ವರದಿ ಒಪ್ಪಿಸುತ್ತೇನೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ನಮ್ಮ ಮಾಜಿ ಸಿಎಂ ಮತ್ತು ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ನನಗೆ ಕರೆ ಮಾಡಿದ್ರು, ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿ ಮೂರನೇ ಅಭ್ಯರ್ಥಿ ಹಾಕುವಂತೆ ಮನವಿ ಮಾಡಿದ್ದರು. ನೀವು ಹಾಕಿ ಇಲ್ಲಾ ನಾವಾದ್ರೂ ಹಾಕುತ್ತೇವೆ, ಸುಮ್ಮನೆ ಕಾಂಗ್ರೆಸ್ ಬಿಡುವುದು ಬೇಡ ಅಂತ ಹೇಳಿದ್ದರು.
ನಾನೇ ಅವರಿಗೆ ನೀವೇ ಅಭ್ಯರ್ಥಿ ಹಾಕಿ ಫೈಟ್ ಕೊಡೋಣ ಅಂತ ಹೇಳಿದ್ದೆ, ಹಾಗಾಗಿ ಕುಮಾರಸ್ವಾಮಿಯವರು ಅಭ್ಯರ್ಥಿಯನ್ನು ಹಾಕಿದ್ದರು. ಬಿಜೆಪಿ ಮತ್ತು ಜೆಡಿಎಸ್ ಇಬ್ಬರ ನಾಯಕರ ಉದ್ದೇಶ ಒಳ್ಳೆಯದಾಗಿತ್ತು. ಸಾಧ್ಯವಾದಷ್ಟು ಮೂರನೇ ಅಭ್ಯರ್ಥಿ ನಾವೇ ಗೆಲ್ಲಬೇಕು, ಫೈಟ್ ಕೊಡಲು ಎರಡು ಪಕ್ಷಗಳ ನಾಯಕರು ಪ್ರಯತ್ನ ಮಾಡಿದ್ದು ಸತ್ಯ ಆದರೆ ನಿನ್ನೆ ಹಾಗೆ ನಡೆಯಲಿಲ್ಲ ಎಂದಿದ್ದಾರೆ.
ಅಡ್ಡಮತದಾನ ಮಾಡಿದ ಶಾಸಕರನ್ನ ಕ್ಷಮಿಸಲ್ಲ
ಮತದಾನದ ವೇಳೆ ಜೆಡಿಎಸ್ನಿಂದ 6-7, ಬಿಜೆಪಿಯಿಂದ 4-5 ಅಡ್ಡಮತದಾನ ನಡೆದಿವೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಶಾಸಕರು ಯಾರೂ ಅಡ್ಡಮತದಾನ ಮಾಡಿದ್ದಾರೋ? ಅವರನ್ನು ಕ್ಷಮಿಸುವಂತಹ ಪ್ರಶ್ನೆಯೇ ಇಲ್ಲ. ಆಟವಾಡಿದವರ ಮಾಹಿತಿ ನಮ್ಮಲ್ಲಿದೆ. ಈಗಾಗಲೇ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ಸಮಯ ಕೇಳಿದ್ದೇನೆ.
ಒಂದಂತೂ ಸತ್ಯ ಮೀರ್ ಸಾಧಿಕ್ರನ್ನು ಪಕ್ಷ ಗಮನಿಸುತ್ತದೆ. ರಾಜ್ಯದಲ್ಲಿ ನಡೆದ ಈ ಬೆಳವಣಿಗೆಯ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಮುಂದೆ ವಿವರಿಸುತ್ತೇನೆ. ಇವತ್ತು ಅಥವಾ ಸೋಮವಾರ ಯಾವಾದ ಸಮಯ ಕೊಡುತ್ತಾರೋ ಆಗ ದೆಹಲಿಗೆ ತೆರಳಿ ಎಲ್ಲವನ್ನೂ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.