ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ 1,300 KPS ಶಾಲೆಗಳ ನಿರ್ಮಾಣದ ಕುರಿತು ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ. 
ರಾಜ್ಯ

4,500 ಕೋಟಿ ರೂ. ವೆಚ್ಚದಲ್ಲಿ 1,300 KPS ಶಾಲೆ ನಿರ್ಮಾಣ; AI ಶಿಕ್ಷಣ,ಉಚಿತ ಬಸ್ ಸೌಲಭ್ಯ: ಸಚಿವ ಮಧು ಬಂಗಾರಪ್ಪ! Madhu Bangarappa

4,500 ಕೋಟಿ ರೂ. ವೆಚ್ಚದಲ್ಲಿ 1,300 KPS ಶಾಲೆ ಸ್ಥಾಪನೆ ಕೆಪಿಎಸ್‌ ಶಾಲೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೇಶದ ಗಮನ ಸೆಳೆಯಲಿದೆ ಮೂರನೇ ತರಗತಿಯಿಂದಲೇ ಎಐ ಶಿಕ್ಷಣ, ಪ್ರಾಥಮಿಕ ಹಂತದಿಂದ ಕಂಪ್ಯೂಟರ್‌ ಕಲಿಕೆ ಕೆಪಿಎಸ್‌ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ, ಉಚಿತ ಬಸ್‌ ಸೌಲಭ್ಯ

ಬೆಂಗಳೂರು: ಮುಂದಿನ ಎರಡು ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ 1,300 ಕರ್ನಾಟಕ ಪಬ್ಲಿಕ್‌ (KPS) ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಈ ಶಾಲೆಗಳ ನಿರ್ಮಾಣದ ಮೂಲಕ ಕರ್ನಾಟಕವು ಶೈಕ್ಷಣಿಕವಾಗಿ ದೇಶದಲ್ಲೇ ಗಮನ ಸೆಳೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ (ನ.25) ಬೆಂಗಳೂರಿನ ಬಿಐಇಸಿ ಸಭಾಂಗಣದಲ್ಲಿ ಇಂಡಿಯಾ ಡೈಡ್ಯಾಕ್ ಆಯೋಜಿಸಿದ್ದ ಟೈಸ್‌ (TIEES) ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಕೌಶಲ್ಯ ಕುರಿತ ಸಮ್ಮೇಳನ ಮತ್ತು ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೆಪಿಎಸ್‌ ಶಾಲೆಗಳಲ್ಲಿ ಪ್ರತಿಯೊಂದು ವಿಷಯಕ್ಕೂ ನುರಿತ ಶಿಕ್ಷಕರನ್ನು ನೇಮಿಸಲಾಗುವುದು. ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ನೀಡಲಾಗುವುದು. ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್‌ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

4,500 ಕೋಟಿ ವೆಚ್ಚದಲ್ಲಿ ನಿರ್ಮಾಣ

ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ (ADB) ಸಾಲ ನೀಡುತ್ತಿದ್ದು, ರಾಜ್ಯ ಸರ್ಕಾರದ ಅನುದಾನ ಸೇರಿದಂತೆ ಒಟ್ಟು 4,500 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಪ್ರತಿಯೊಂದು ಕೆಪಿಎಸ್‌ ಶಾಲೆಗೂ ಸರ್ಕಾರದ ವತಿಯಿಂದ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದರು.

ಮಾನವೀಯ ಮೌಲ್ಯಗಳಿಗೂ ಒತ್ತು

ಶೈಕ್ಷಣಿಕ ವಿಷಯಗಳ ಬೋಧನೆಯ ಜೊತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸಂಗೀತ ಮತ್ತು ರಂಗಭೂಮಿ ಶಿಕ್ಷಕರನ್ನೂ ಕೆಪಿಎಸ್‌ ಶಾಲೆಗಳಲ್ಲಿ ಒದಗಿಸಲಾಗುವುದು. ನಮ್ಮದು ಸಂಸ್ಕೃತಿಯನ್ನು ಗೌರವಿಸುವ ದೇಶ. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಸ್ಕೃತಿ ಮತ್ತು ಪರಂಪರೆಗೆ ವಿಶೇಷ ಗೌರವವಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದಕ್ಕೂ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿದ್ದು, ಎಲ್ಲ ಶಾಲೆಗಳ ಮಕ್ಕಳೂ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂದು ಮಕ್ಕಳು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿಯದೆಯೇ ನಿರರ್ಗಳವಾಗಿ ಪ್ರಸ್ತಾವನೆಯನ್ನು ಓದುತ್ತಿದ್ದಾರೆ. ಸಂವಿಧಾನವೇ ಶ್ರೇಷ್ಠ ಎಂಬ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿ

ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರೌಢಶಿಕ್ಷಣ ಪೂರ್ಣಗೊಳಿಸುವ ವೇಳೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದಲ್ಲಿ ಸ್ವಾವಲಂಬಿಯಾಗಿ ಬದುಕಲು ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸುವ ವಾತಾವರಣ ನಿರ್ಮಿಸಲಾಗುತ್ತಿದೆ. ಇದರಿಂದ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

ಶೃಂಗಸಭೆಯಲ್ಲಿ ಮಾಲ್ದೀವ್ಸ್ ಗಣರಾಜ್ಯದ ಉನ್ನತ ಶಿಕ್ಷಣ ಸಚಿವ ಅಹಮದ್‌ ಶೆಫ್ಯೂ, ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌, ಪ್ರಸಿದ್ಧ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಮಾಜಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.