Shobha Karandlaje > ರಾಹುಲ್ ಗಾಂಧಿ ತೃಪ್ತಿಪಡಿಸಲು ಕಾಂಗ್ರೆಸ್‌ನಿಂದ ಪ್ರತ್ಯೇಕ ಎಸ್‌ಐಆರ್!; ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಶೋಭಾ ಕರಂದ್ಲಾಜೆ 
ರಾಜ್ಯ

ರಾಹುಲ್ ಗಾಂಧಿ ತೃಪ್ತಿಪಡಿಸಲು ಕಾಂಗ್ರೆಸ್‌ನಿಂದ ಪ್ರತ್ಯೇಕ ಎಸ್‌ಐಆರ್!; ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಶೋಭಾ ಕರಂದ್ಲಾಜೆ | Shobha Karandlaje

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಕ್ರಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಮುಂದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಕ್ರಮಗಳನ್ನು ತಕ್ಷಣವೇ ತಡೆಯುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಪ್ರಮುಖ ಪತ್ರಗಳನ್ನು ಬರೆದಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಎರಡು ಪ್ರಮುಖ ವಿಷಯಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ಜಿಬಿಎ ವಾರ್ಡ್‌ಗಳಲ್ಲಿ ಎರಡೆರಡು ಎಸ್‌ಐಆರ್ ಹಾವಳಿ!

ಜಿಬಿಎ (GBA) ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ನಿಯಮಬಾಹಿರವಾಗಿ ಎರಡೆರಡು ಎಸ್‌ಐಆರ್ ನಡೆಸಲಾಗುತ್ತಿದೆ, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸುವುದಕ್ಕಾಗಿಯೇ ಸರ್ಕಾರ ಈ ರೀತಿಯ ಅಕ್ರಮ ಕೆಲಸಗಳಿಗೆ ಕೈಹಾಕಿದೆ. ಒಂದೆಡೆ ರಾಜ್ಯ ಚುನಾವಣಾ ಆಯೋಗ ಮತ್ತೊಂದು ಎಸ್‌ಐಆರ್ ನಡೆಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಅನರ್ಹರು ಇರಬಾರದು ಎಂಬ ಉದ್ದೇಶದಿಂದಲೇ ಈ ಎಸ್‌ಐಆರ್ ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ರಾಜ್ಯದ ಅಕ್ರಮ ಮತದಾರರ ಪಟ್ಟಿ ಸಿದ್ಧಪಡಿಸಲು ಸರ್ಕಾರವೇ ನೇರ ಹಾದಿ ಮಾಡಿಕೊಟ್ಟಿದೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ.

ಬಿಎಲ್ಎ ಮತ್ತು ಬಿಎಲ್ಒಗಳ ಕೂಡಿಹಾಕಿದ ಕಾಂಗ್ರೆಸ್!

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ ಕರಂದ್ಲಾಜೆ ಅವರು, ಕಾಂಗ್ರೆಸ್ ನಾಯಕರು ಚುನಾವಣಾ ಬೂತ್ ಮಟ್ಟದ ಏಜೆಂಟರು (ಬಿಎಲ್​ಎ) ಹಾಗೂ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್​ಓ) ಕೂಡಿಹಾಕಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರು ಅಕ್ರಮ ಮತದಾರರನ್ನು ಬಾಂಗ್ಲಾದೇಶದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಅತ್ಯಂತ ಸ್ಫೋಟಕ ಜಿಹಾದಿ ರಾಜಕಾರಣದ ಆರೋಪ ಮಾಡಿದರು.
ಇದೇ ಹಳೇ ತಂತ್ರವನ್ನು ಕಾಂಗ್ರೆಸ್ ಈ ಹಿಂದೆಯೂ ಬಳಸಿತ್ತು. ಸುಮಾರು 8 ವರ್ಷಗಳ ಹಿಂದೆ ರೈಲಿನಲ್ಲಿ ಅಪರಿಚಿತ ಯುವಕರನ್ನು ಕರೆತಂದು ಅಕ್ರಮವಾಗಿ ವೋಟ್ ಮಾಡಿಸಲಾಗಿತ್ತು. ಈಗ ಮತ್ತೆ ಅದೇ ಮಾದರಿಯಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ಯತ್ನಿಸಲಾಗುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ತಕ್ಷಣವೇ ಮಧ್ಯಪ್ರವೇಶಿಸಿ ಈ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.