ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ(ಎಸ್‌ಸಿಎಸ್‌ಪಿ-ಟಿಎಸ್‌ಪಿ) ಪರಿಣಾಮಕಾರಿಯಾಗಿ ಅನುದಾನ ಹಂಚಿಕೆ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಆಹಾರ ಇಲಾಖೆ, ಎಸ್ಸಿ ಮತ್ತು ಎಸ್ಟಿ ಫಲಾನುಭವಿಗಳ ರೇಷನ್ ಕಾರ್ಡ್‌ಗಳ ಮಾಹಿತಿಯನ್ನು ಕಲೆಹಾಕುತ್ತಿದೆ.
2022-23ರಿಂದ ಇದುವರೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಶೇ.65 ಎಸ್ಸಿ,ಎಸ್ಟಿ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಪ್ರತಿ ವರ್ಷ ಸರ್ಕಾರ, ಅನ್ನಭಾಗ್ಯ ಯೋಜನೆಗಾಗಿ 4-5 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಅನುದಾನ ಮಂಜೂರಾದ ಬಳಿಕ ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಪಡಿತರಕ್ಕೆ ಖರ್ಚು ಮಾಡಲಾಗುತ್ತಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅಡಿ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಅನುದಾನ ನೀಡಲಾಗುತ್ತಿದೆ. ಹಾಗಾಗಿ, ಈ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳಲು ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ಎಸ್ಸಿ ಮತ್ತು ಎಸ್ಟಿ ಫಲಾನುಭವಿಗಳು ಹೊಂದಿರುವ ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಹಾಗೂ ಕಾರ್ಡ್‌ನಲ್ಲಿರುವ ಸದಸ್ಯರ ಸಂಖ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಈ ಹಿಂದೆಯೇ ಆಹಾರ ಇಲಾಖೆಗೆ ಪತ್ರ ಬರೆದಿತ್ತು. ಇದರ ಆಧಾರದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇದರಿಂದಾಗಿ ಫಲಾನುಭವಿಗಳ ಸಂಖ್ಯೆ ಆಧಾರದಲ್ಲಿ ಸಮರ್ಪಕವಾಗಿ ಅನುದಾನ ಸದ್ಬಳಕೆಗೆ ಹಾಗೂ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ- ಟಿಎಸ್‌ಪಿ ಅಡಿ ಅನುದಾನ ಹಂಚಿಕೆ ಮಾಡುವುದಕ್ಕೆ ಸಾಕಷ್ಟು ಸಹಾಯವಾಗಲಿದೆ ಎಂದು ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.
ಎಸ್ಸಿ ಮತ್ತು ಎಸ್ಟಿ ಪಡಿತರ ಚೀಟಿಗಳ ಮಾಹಿತಿ ಸಂಗ್ರಹಕ್ಕಾಗಿ ಇಲಾಖೆ ಪ್ರತ್ಯೇಕವಾಗಿ ಅರ್ಜಿ ಸಿದ್ಧಪಡಿಸಿದೆ. ಅರ್ಜಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ,ಎಸ್ಟಿ ಪಡಿತರ ಚೀಟಿಗಳ ಮಾಹಿತಿ ಸಂಗ್ರಹ ವಿವರವೆಂದು ನಮೂದಿಸಿದೆ. ತಾಲೂಕು ಹೆಸರು, ನ್ಯಾಯಬೆಲೆ ಅಂಗಡಿ ಸಂಖ್ಯೆ ಮತ್ತು ಹೆಸರು, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ( ಬಿಪಿಎಲ್ ಮತ್ತು ಅಂತ್ಯೋದಯ), ಕುಟುಂಬದ ಮುಖ್ಯಸ್ಥರ ಹೆಸರು, ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗ (ಜಾತಿ), ಕಾರ್ಡ್‌ನಲ್ಲಿರುವ ಸದಸ್ಯರ ಸಂಖ್ಯೆ ಹಾಗೂ ಷರಾ ಎಂಬ ಅಂಶವನ್ನು ಅರ್ಜಿ ಕಾಲಂನಲ್ಲಿ ಪ್ರಕಟಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯುವುದಕ್ಕೆ ಬರುವ ಪ್ರತಿ ಕಾರ್ಡ್‌ದಾರರ ಬಳಿ ಮಾಹಿತಿ ಪಡೆದು ಮಾಲೀಕರು ಅರ್ಜಿಯಲ್ಲಿ ನಮೂದಿಸಲಾಗುತ್ತಿದೆ. ಕೊನೆಗೆ ಅರ್ಜಿ ಕೆಳಗೆ ಆಹಾರ ನಿರೀಕ್ಷರ ಹೆಸರು ಮತ್ತು ಸಹಿ, ನ್ಯಾಯಬೆಲೆ ಸಂಚಾಲಕರ ಹೆಸರು ಮತ್ತು ರುಜು ಹಾಕಲಾಗುತ್ತದೆ.