ಚಳಿ 
ರಾಜ್ಯ

15 ಜಿಲ್ಲೆಗಳಲ್ಲಿ ಶೀತ ಮಾರುತ ಅಲರ್ಟ್ -cold wave

ಹರೀಶ್​​ ಕೆ.ಸಿ.
ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ಮುಂದಿನ 2 ವಾರ ಶೀತಗಾಳಿ(ಕೋಲ್ಡ್‌ವೇವ್) ಬೀಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಇದರಿಂದಾಗಿ ಕರುನಾಡು ಚಳಿಗೆ ಇನ್ನಷ್ಟು ತತ್ತರಿಸಲಿದೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ಹಾವೇರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರಿನಲ್ಲಿ ಕನಿಷ್ಠ ತಾಪಮಾನ ಕುಸಿತವಾಗಿರುವ ಕಾರಣ ಶೀತಗಾಳಿಯ ಅಲರ್ಟ್ ಕೊಡಲಾಗಿದೆ.
ಮುಂದಿನ ದಿನಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 6 ಅಥವಾ 7 ಡಿ.ಸೆ.ಗೆ ಇಳಿಮುಖವಾಗಲಿದೆ. ಶೀತ ಮಾರುತವು ಸಸ್ಯಗಳಲ್ಲಿ ಶಿಲೀಂಧ್ರ ರೋಗ ಉಂಟು ಮಾಡುವ ಜೊತೆಗೆ ಜನರಆರೋಗ್ಯ ಸಮಸ್ಯೆಗೂ ಕಾರಣವಾಗಲಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕನಿಷ್ಠ ತಾಪಮಾನದಲ್ಲಿ ಬೀದರ್ 7.4, ಹಾಸನ 8.7, ಧಾರವಾಡ 9.5, ವಿಜಯಪುರ 10, ಮೂಡಗೆರೆ 10.5 ಮತ್ತು ಗದಗ 10.6 ಡಿ.ಸೆ. ಉಷ್ಣಾಂಶ ಭಾನುವಾರ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 6-8 ಡಿ.ಸೆ.ಇಳಿಮುಖವಾಗಿದೆ.
ತಾಪಮಾನ ಕುಸಿತದಿಂದ ರಾಜ್ಯದ ಹಲವೆಡೆ ಮತ್ತಷ್ಟು ಥಂಡಿ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಮತ್ತು ಮುಂಜಾನೆ ವೇಳೆ ಇಬ್ಬನಿ ಸುರಿದು ಮಂಜುಮಯ ವಾತಾವರಣ ಉಂಟಾಗಿದೆ. ಮುಂಜಾನೆ ಮಂಜುವಿನಿಂದ ವಾಹನಗಳ ಸವಾರರಿಗೆ ತೊಂದರೆಯಾಗಿದೆ. ಮಧ್ಯಾಹ್ನ ವೇಳೆ ತಂಪಾದ ಗಾಳಿ ಬೀಸುತ್ತಿರುವುದರಿಂದ ಚಳಿಯ ಅನುಭವ ಇನ್ನಷ್ಟು ಜಾಸ್ತಿಯಾಗಿದೆ.