Chikkaballapur sister marries brother
- ಚಿಕ್ಕಬಳ್ಳಾಪುರದಲ್ಲಿ ವರಸೆಯಲ್ಲಿ ತಮ್ಮನಾಗುವವನ ಜೊತೆ ಹಸೆಮಣೆ ಏರಿದ ಅಕ್ಕ
- ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗಲೇ ಪ್ರಿಯಕರ ತಮ್ಮನ ಜೊತೆ ಯುವತಿ ಎಸ್ಕೇಪ್
- ಪೋಷಕರ ವಿರೋಧ ನಡುವೆಯೂ ಸಪ್ತಪದಿ ತುಳಿದ ಜೋಡಿಯಿಂದ ಜೀವ ಬೆದರಿಕೆ ಆರೋಪ
ಚಿಕ್ಕಬಳ್ಳಾಪುರ: ಪ್ರೀತಿ ಎಂಬ ಮಾಯಾಜಾಲಕ್ಕೆ ಬಿದ್ದಾಗ ಆತ ಅಣ್ಣನೋ, ತಮ್ಮನೋ ಅಕ್ಕ ಅಥವಾ ತಂಗಿ ಎನ್ನುವ ಪರಿವೇಯೇ ಇರೋದಿಲ್ಲ..ಪ್ರೀತಿ ಸಾಕು ಎನ್ನುವ ವಿಚಾರಕ್ಕೆ ಒಂದು ಜೀವಂತ ಉದಾಹರಣೆ ಸಿಕ್ಕಿದೆ. ವರಸೆಯಲ್ಲಿ ತಮ್ಮನಾಗ ಬೇಕಿದ್ದವನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ವರಸೆಯಲ್ಲಿ ಅಕ್ಕ-ತಮ್ಮ
ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ಪರಸ್ಪರ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಇವರಿಬ್ಬರ ಪ್ರೇಮಕ್ಕೆ ಮುಳ್ಳಾಗಿದ್ದು ರಕ್ತ ಸಂಬಂಧ ಅದು ಹೇಗೆ ಎಂದರೆ, ಇಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರು. ಅಂದರೆ, ವರಸೆಯಲ್ಲಿ ಇಬ್ಬರೂ ಸೋದರ ಅಕ್ಕ-ತಮ್ಮನಾಗಬೇಕು. ಹೀಗಾಗಿ ಕುಟುಂಬಸ್ಥರ ವಿರೋಧವಿತ್ತು.
ಹೀಗಾಗಿ ಶಶಿಕಲಾ ಪೋಷಕರು ಆಕೆಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯಿಸಿದ್ದರು. ಲಗ್ನಪತ್ರಿಕೆ ಕೂಡ ಹಂಚಲಾಗಿತ್ತು. ಆದರೆ, ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗಲೇ ಶಶಿಕಲಾ ತನ್ನ ಪ್ರಿಯಕರ ಪ್ರವೀಣ್ ಜೊತೆ ಪರಾರಿಯಾಗಿದ್ದಾಳೆ. ನಂತರ ಈ ಜೋಡಿಯು ಅಂಗಟ್ಟದ ಶಿವನ ಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಜೀವಬೆದರಿಕೆ ಆರೋಪ
ಮದುವೆ ಬಳಿಕ ಶಶಿಕಲಾ ಅವರ ಪೋಷಕರು ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೇಳಿಬಂದಿದೆ. ಈ ಹಿನ್ನೆಲೆ ಅವರು ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ. ಅಕ್ಕನ ಮಗಳಾಗಿ ಸ್ವಂತ ತಮ್ಮನನ್ನೇ ಮದುವೆಯಾಗಿದ್ದೀಯಲ್ಲಾ, ನಿನಗೆ ನಾಚಿಕೆಯಾಗುವುದಿಲ್ಲವೇ? ಎಂದು ಆಕ್ರಂದಿಸಿದ್ದಾರೆ. ಆಕೆ ಆಗ ಇವನೇ ನನ್ನ ಸರ್ವಸ್ವ ನಾನು ಬೇರೆಯವರನ್ನು ಮದುವೆಯಾಗೋದಿಲ್ಲ ಎಂದಿದ್ದಾರೆ, (ಏಜೆನ್ಸೀಸ್).