SIR ಪ್ರಗತಿ ವರದಿ ಬಿಡುಗಡೆ: ರಾಜ್ಯದಲ್ಲಿ 4.43 ಕೋಟಿಗೂ ಅಧಿಕ ಅರ್ಜಿಗಳ ಡಿಜಿಟಲೀಕರಣ, 16,30,012 ಮತದಾರರು ನಾಪತ್ತೆ!
- ರಾಜ್ಯದಲ್ಲಿ ಭರಾಟೆಯಿಂದ ಸಾಗಿದ ಎಸ್‌ಐಆರ್ ಪ್ರಕ್ರಿಯೆ
- 4.43 ಕೋಟಿಗೂ ಅಧಿಕ ಅರ್ಜಿಗಳ ಡಿಜಿಟಲೀಕರಣ ಪೂರ್ಣ
- ಮತದಾರರ ಪಟ್ಟಿಯಿಂದ ಬರೋಬ್ಬರಿ 66 ಲಕ್ಷಕ್ಕೂ ಹೆಚ್ಚು ಶಾಶ್ವತ ಸ್ಥಳಾಂತರಗೊಂಡವರು ಔಟ್
- ಎರಡು ಕಡೆ ವೋಟ್ ಹೊಂದಿರುವವರು ಹಾಗೂ ನಕಲಿ ಮತದಾರರ ಪತ್ತೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯ ಪ್ರಗತಿ ಕುರಿತು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಡಿಜಿಟಲೀಕರಣ ಕಾರ್ಯ ವೇಗವಾಗಿ ಸಾಗುತ್ತಿದ್ದು, ಈ ಕುರಿತ ಸಮಗ್ರ ವರದಿಯನ್ನು ನೀಡಿದ್ದಾರೆ.
ರಾಜ್ಯಾದ್ಯಂತ ಜೂನ್ 30ರಿಂದ ಆರಂಭವಾಗಿರುವ ಎಸ್‌ಐಆರ್ ಪ್ರಕ್ರಿಯೆಯು ಆಗಸ್ಟ್ 8ರವರೆಗೆ ಮುಂದುವರಿಯಲಿದೆ. ಈ ಅಭಿಯಾನದಡಿ ಈಗಾಗಲೇ ಒಟ್ಟು 5,54,32,314 ಎನ್ಯುಮರೇಷನ್ ಫಾರ್ಮ್ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಇದುವರೆಗೆ ರಾಜ್ಯದಲ್ಲಿ ಶೇ. 79.93ರಷ್ಟು ಪ್ರಗತಿ ಸಾಧಿಸಲಾಗಿದ್ದು, ಒಟ್ಟು 4,43,04,632 ಅರ್ಜಿಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪರಿಶೀಲನೆ ವೇಳೆ ರಾಜ್ಯದಲ್ಲಿ ಒಟ್ಟು 1,11,04,705 ಎಎಸ್‌ಡಿಡಿಒ (ASDDO) ಅಂದರೆ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹಾಗೂ ಇತರೆ ಮತದಾರರು ಪತ್ತೆಯಾಗಿದ್ದಾರೆ. ಈ ಪೈಕಿ 16,30,012 ಮತದಾರರು ಪತ್ತೆಯಾಗಿಲ್ಲವಾದರೆ, 66,64,943 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ 16,30,872 ಮತದಾರರು ಮೃತಪಟ್ಟಿರುವುದು ಹಾಗೂ ಎರಡು ಕಡೆ ಮತದಾನದ ಹಕ್ಕು ಹೊಂದಿರುವ 6,89,904 ಮತ್ತು ಇತರೆ 4,88,974 ಮತದಾರರನ್ನು ಗುರುತಿಸಲಾಗಿದೆ.
ಎಸ್‌ಐಆರ್ ಉದ್ದೇಶವೇನು?
ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷರಹಿತ, ಪಾರದರ್ಶಕ ಮತ್ತು ನಿಖರವಾಗಿಸುವುದು ಎಸ್‌ಐಆರ್ (SIR) ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ. ಇದರಡಿ ನಕಲಿ, ಮೃತಪಟ್ಟ ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರನ್ನು ಗುರುಕಿ ಪಟ್ಟಿಯಿಂದ ಕೈಬಿಡಲಾಗುತ್ತದೆ ಮತ್ತು ಎರಡು ಕಡೆ ಮತದಾನದ ಹಕ್ಕು ಹೊಂದಿರುವವರ ಹೆಸರುಗಳನ್ನು ಸರಿಪಡಿಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬ ಅರ್ಹ ನಿಜವಾದ ಮತದಾರರಿಗೂ ಚುನಾವಣೆಯಲ್ಲಿ ಮುಕ್ತವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸುವುದು ಮತ್ತು ಮತದಾರರ ಪಟ್ಟಿಯ ಗುಣಮಟ್ಟವನ್ನು ಸುಧಾರಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.