Chicken and Egg Prices Rise in Bengaluru
- ಬೆಂಗಳೂರಿನಲ್ಲಿರುವ ಬಾಡೂಟ ಪ್ರಿಯರಿಗೆ ಬ್ಯಾಡ್ ನ್ಯೂಸ್
- ಚಿಕನ್ ಹಾಗೂ ಕೋಳಿ ಮೊಟ್ಟೆ ದರದಲ್ಲಿ ಭಾರೀ ಏರಿಕೆ
- 250 ರೂ. ಇದ್ದ ಚಿಕನ್ ದರ 360 ರೂ.ಗೆ ಏರಿಕೆ, 7.50 ರೂ ಇದ್ದ ಮೊಟ್ಟೆದ 9ಕ್ಕೆ ಏರಿಕೆ
ಬೆಂಗಳೂರು: ನಿತ್ಯ ಫಿಟ್ನೆಸ್ಗಾಗಿ ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವವರಿಗೆ, ಭಾನುವಾರ ಬಂದರೆ ಸಾಕು ಬಾಡೂಟ ಇರಲೇ ಬೇಕು ಎಂದು ಬಯಸೋ ನಾನ್ವೆಜ್ ಪ್ರಿಯರಿಗೆ ಕಹಿ ಸುದ್ದಿ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮೊಟ್ಟೆ ಹಾಗೂ ಚಿಕನ್ ಬೆಲೆ ಗಗನಕ್ಕೇರಿಕೆಯಾಗಿದೆ.
ಒಂದು ವಾರದ ಹಿಂದೆ ಕೆಜಿಗೆ 250ರೂ.ಗೆ ಸಿಗುತ್ತಿದ್ದ ಸ್ಕಿನ್ಲೆಸ್ ಚಿಕನ್ ಮಾಂಸದ ಬೆಲೆ ಈಗ 360 ರೂಪಾಯಿ ಆಗಿದೆ. ಇನ್ನೂ ಆರೂವರೆಯಿಂದ 7 ರೂಪಾಯಿದ್ದ ಮೊಟ್ಟೆ ಬೆಲೆ ಈಗ 9ರೂಪಾಯಿಗೆ ಏರಿಕೆಯಾಗಿದೆ ಎನ್ನಲಾಗಿದೆ.
ಎಷ್ಟಿದೆ ಚಿಕನ್ ದರ?
ಮಾಂಸ ಮಾರಾಟ ಮಾರುಕಟ್ಟೆ ವರದಿ ಪ್ರಕಾರ ಚರ್ಮವಿಲ್ಲದ ಬಾಯ್ಲರ್ ಚಿಕನ್ ಪ್ರತಿ ಕೆಜಿಗೆ 360ರೂಪಾಯಿಯಾದರೆ, ಇನ್ನೂ ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಕೆಲವು ದಿನದ ಹಿಂದೆ 300 ರೂಪಾಯಿ ಆಸುಪಾಸಿನಲ್ಲಿದ್ದ ಬೆಲೆ ಈಗ 350ರಿಂದ 360ಕ್ಕೆ ತಲುಪಿರುವುದು ನಾನ್ವೆಜ್ ಪ್ರಿಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಮೊಟ್ಟೆ ದರ ಎಷ್ಟಿದೆ?
ಒಂದು ವಾರದ ಹಿಂದೆಯಷ್ಟೇ ಒಂದು ಮೊಟ್ಟೆಗೆ 6 ರಿಂದ ಏಳೂವರೆ ರೂಪಾಯಿ ಇತ್ತು. ಆದರೆ, ಈಗ 9ರಿಂದ 10 ರೂಪಾಯಿಗೆ ಮೊಟ್ಟೆ ದರ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಿಲಿಂಡರ್ ದರದಿಂದ ಕೊಂಚ ಸಾವರಿಸಿಕೊಳ್ಳುತ್ತಿರುವ ಗ್ರಾಹಕರಿಗೆ ಬಿಸಿ ತಟ್ಟಿದಂತಾಗಿದೆ.
ಚಿಕನ್, ಮೊಟ್ಟೆ ದರ ಏರಿಕೆಗೆ ಕಾರಣವೇನು?
ಈ ಬಾರಿ ಕೋಳಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದ ಕಾರಣ ಹಾಗೂ ಬೇರೆ ರಾಜ್ಯಕ್ಕೆ ಕೋಳಿ ಪೂರೈಕೆ ಹೆಚ್ಚಾಗುತ್ತಿರುವ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆ ಹಾಗೂ ಚಿಕನ್ ದರ ಏರಿಕೆ ಕಂಡಿದೆ ಎನ್ನುವ ಮಾಹಿತಿಯನ್ನು ಮಾರಾಟಗಾರರು ಹಂಚಿಕೊಂಡಿದ್ದಾರೆ.
ಚಿಕನ್ ಬದಲಾಗಿ ಇದನ್ನು ತಿನ್ನಿ
ಚಿಕನ್ ದರ ಏರಿಕೆಯಾದ ಸಮಯದಲ್ಲೇ ಮಾಂಸಾಹಾರ ತಿನ್ನುವ ಬಯಕೆ ಹೆಚ್ಚು. ಈ ಹಿನ್ನೆಲೆ ನಿಮಗೇನಾದ್ರು ಚಿಕನ್ ತಿನ್ನುವ ಆಸೆಯಾದರೆ, ಸೋಯಾಬೀನ್ ಅಥವಾ ಮಶ್ರೂಮ್ ಅನ್ನು ತಿನ್ನಲು ಪ್ಲ್ಯಾನ್ ಮಾಡಿ. ಹೌದು ಸೋಯಾಬೀನ್ ಚಂಕ್ಸ್ ಹಾಗೂ ಮಶ್ರೂಮ್ ಅಥವಾ ಪನ್ನೀರ್ಗೆ ಚಿಕನ್ ಅಥವಾ ಮಟನ್ ಕರಿಗಳನ್ನು ಬಳಸಿ ಅಡುಗೆ ಮಾಡಿ ಸವಿಯಬಹುದು, (ಏಜೆನ್ಸೀಸ್).