ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ 
ರಾಜ್ಯ

ಸಾಧನೆಯ ಹಾದಿಯಲ್ಲಿ ಸವಾಲು ಸಹಜ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮತ-Lakshmi Hebbalkar

ಬೆಂಗಳೂರು: ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಕಹಳೆ ಮೊಳಗಿಸಿದವರು ಕಿತ್ತೂರು ರಾಣಿ ಚನ್ನಮ್ಮ. ಅಂದಿನ ಕಾಲದಲ್ಲೇ ಅವರು ಧೈರ್ಯ ಮಾಡದಿದ್ದರೆ ಅಥವಾ ವೀರಾವೇಶದಿಂದ ಕತ್ತಿಯನ್ನು ಝಳಪಿಸದಿದ್ದರೆ ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಹಾಗೂ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ, ಸಾವಿತ್ರಿಬಾಯಿ ಫುಲೆ, ಮದರ್ ತೆರೇಸಾ, ಇಂದಿರಾ ಗಾಂಧಿ ಮತ್ತು ಗಂಗೂಬಾಯಿ ಹಾನಗಲ್ ಸೇರಿ ಹಲವು ಮಹನೀಯರಿಂದ ಈಗನ ಕಾಲದಲ್ಲಿ ಮಹಿಳೆಯರನ್ನು ಈ ಮಟ್ಟಕ್ಕೆ ಗುರುತಿಸಲು ಸಾಧ್ಯವಾಗಿದೆ. ಜೊತೆಗೆ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಗೌರವವೂ ಬಂದಿದೆ. ಸಾಧನೆ ಮಾಡುವಂತಹ ಸಂದರ್ಭದಲ್ಲಿ ಅಪಮಾನ, ಕಷ್ಟ, ಸಂಕಷ್ಟ ಸೇರಿ ಹಲವು ಸವಾಲುಗಳು ಇರುತ್ತದೆ. ಆದರೆ, ಸಾಧನೆಯನ್ನು ಯಾರು ತಡೆಯುವುದಕ್ಕೆ ಆಗಲ್ಲ ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಮಹಿಳೆ ಎಂದರೆ ದೀಪ ಇದ್ದಂತೆ. ಆಕೆ ತನ್ನ ಕುಟುಂಬಕ್ಕಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿಕೊಂಡು ಬರುತ್ತಿದ್ದಾಳೆ. ಮಹಿಳೆಯರ ಹಕ್ಕುಗಳಿಗೆ ಹಲವು ಮಹನೀಯರು ಹೋರಾಟ ಮಾಡಿದ್ದಾರೆ. ರಾಜಕೀಯ ಸೇರಿ ಎಲ್ಲ ರಂಗಗಳಲ್ಲೂ ಮಹಿಳೆಯರು ತನ್ನದೆಯಾದ ಛಾಪು ಮೂಡಿಸಿದ್ದಾಳೆ. ನಮ್ಮ ಸರ್ಕಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಎಲ್ಲ ಫಲಾನುಭವಿಗಳಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರ ಅವರಿಗೆ ಸಿಗುವಂತಾಗಲಿ ಎಂದು ಆಶಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಗಳಿಗೆ, ಸಾಧಕಿಯರಿಗೆ ಮತ್ತು ಅತ್ಯುತ್ತಮ ಸೀಶಕ್ತಿ ಗುಂಪುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್‌ಬಾಬು ಮತ್ತಿತರರಿದ್ದರು.