ನಟಿ ಐಂದ್ರಿತಾ ರೈ, ಶಾಸಕ ಮುನಿರತ್ನ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್
- ಗ್ರೇಟರ್ ಬೆಂಗಳೂರು ಪಾಲಿಕೆ ಅಧಿಕಾರಿಗಳ ವಿರುದ್ಧ ನಟಿ ಐಂದ್ರಿತಾ ರೈ ಅಸಮಾಧಾನ
- ತಮ್ಮ ಮನೆಯ ಹತ್ತಿರದಲ್ಲೇ ಕಸದ ರಾಶಿ ಸುಡುತ್ತಿರುವುದರಿಂದ ಐಂದ್ರಿತಾ ಬೇಸರ
- ಕಸವನ್ನು ತೆರೆದ ಸ್ಥಳದಲ್ಲಿ ಸುಡುತ್ತಿರುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಸಹ ರೆಕಾರ್ಡ್
ಬೆಂಗಳೂರು: ನಮ್ಮ ಮನೆಯ ಹತ್ತಿರದ ಬಯಲು ಪ್ರದೇಶದಲ್ಲಿ ಮುಕ್ತವಾಗಿ ಕಸದ ರಾಶಿಯನ್ನು ಸುಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ಈ ಕುರಿತು ಗ್ರೇಟರ್ ಬೆಂಗಳೂರು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಟಿ ಐಂದ್ರಿತಾ ರೈ ( Aindrita Ray ) ಅಸಮಾಧಾನ ಹೊರಹಾಕಿದ್ದಾರೆ.
ನಟಿ ಐಂದ್ರಿತಾ ಅವರು ಆರ್ಆರ್ ನಗರದ ಐಡಿಯಲ್ ಹೋಮ್ಸ್ ಏರಿಯಾದಲ್ಲಿ ನೆಲೆಸಿದ್ದಾರೆ. ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ನಿರಂತರವಾಗಿ ಸುಡುತ್ತಿರುವುದರಿಂದ ನಮ್ಮ ಮನೆ ಹೊಗೆಯಿಂದ ತುಂಬಿದ್ದು, ಉಸಿರಾಡುಲು ಹೋರಾಡುವಂತಹ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಮೂರು ದಿನಗಳಿಂದ ಈ ಪರಿಸ್ಥಿತಿ ಎದುರಾಯಿತು. ಸರಿ ಹೋಗಬಹುದು ಅಂತ ಸುಮ್ಮನಾಗಿದ್ದೆವು. ಆದರೆ, ನಿರಂತರವಾಗಿ ದಟ್ಟ ಹೊಗೆ ಬಂದಿದ್ದರಿಂದ ಕಾರಣ ಏನೆಂದು ತಿಳಿದುಕೊಳ್ಳಲು ನಾವೇ ಫೀಲ್ಡಿಗೆ ಇಳಿದೆವು. ಹೊಗೆ ಬರುವ ಕಡೆ ಹೋಗಿ ನೋಡಿದಾಗ ವಸತಿ ಪ್ರದೇಶಗಳಿಗೆ ತುಂಬಾ ಹತ್ತಿರದಲ್ಲೇ ಇರುವ ತೆರೆದ ಮೈದಾನದಲ್ಲಿ ಕಸದ ರಾಶಿಯನ್ನು ಸುಡುತ್ತಿರುವುದು ನಮ್ಮ ಕಣ್ಣಿಗೆ ಬಿದ್ದಿತು ಎಂದು ಐಂದ್ರಿತಾ ಅವರು ತಿಳಿಸಿದ್ದಾರೆ.
ಕಸವನ್ನು ತೆರೆದ ಸ್ಥಳದಲ್ಲಿ ಸುಡುತ್ತಿರುವುದಕ್ಕೆ ಸಾಕ್ಷಿಯಾಗಿ ವಿಡಿಯೋ ಸಹ ರೆಕಾರ್ಡ್ ಮಾಡಿರುವ ಐಂದ್ರಿತಾ, ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಎನ್ಡಿಟಿವಿ ಜತೆ ಮಾತನಾಡಿರುವ ಐಂದ್ರಿತಾ, ನಾನು ಮೂರು ದಿನಗಳಿಂದ ತುಂಬಾ ಬಳಲುತ್ತಿದ್ದೇನೆ. ಹೊಗೆಯ ದಟ್ಟಣೆ ಇದ್ದು, ಸರಿಯಾಗಿ ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ. ಬೆಂಗಳೂರರಿನ ನಿವಾಸಿಗಳು ತ್ಯಾಜ್ಯ ವಿಂಗಡಣೆ ನಿಯಮಗಳನ್ನು ಪಾಲಿಸುತ್ತಿದ್ದರು ಕೂಡ ಮನೆಯ ಹತ್ತಿರದಲ್ಲೇ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ನಾನು ನನ್ನ ತ್ಯಾಜ್ಯ ವಿಂಗಡಣೆಯನ್ನು ಸರಿಯಾಗಿ ಮಾಡುತ್ತಿದ್ದೇನೆ. ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸುತ್ತೇನೆ. ಹಾಗಿದ್ದರೂ ಇದು ಏಕೆ ನಡೆಯುತ್ತಿದೆ? ನಾನು ನಿಜವಾಗಿಯೂ ಉಸಿರಾಟದಿಂದ ಬಳಲುತ್ತಿದ್ದೇನೆ ಎಂದು ಐಂದ್ರಿತಾ ಬೇಸರ ಹೊರಹಾಕಿದ್ದಾರೆ.
ತನ್ನ ಆರೋಗ್ಯದ ಮೇಲೆ ಕಳವಳ ವ್ಯಕ್ತಪಡಿಸಿರುವ ಐಂದ್ರಿತಾ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಎದುರಾಗಬಹುದು. ನಿನ್ನೆ ರಾತ್ರಿ ಸರಿಯಾಗಿ ಉಸಿರಾಡಲಾಗದೇ ಆಸ್ಪತ್ರೆಗೆ ದಾಖಲಾಗಬೇಕೆನಿಸಿತು. ಪರಿಸ್ಥಿತಿ ಹದಗೆಟ್ಟಿದ್ದರಿಂದ ನಾನು ನನ್ನ ಮನೆಯನ್ನು ಬಿಟ್ಟು, ತವರು ಮನೆಗೆ ಬರಬೇಕಾಯಿತು. ಆದರೆ, ನಾನಿನ್ನೂ ಸುಧಾರಿಸಿಕೊಂಡಿಲ್ಲ ಎಂದು ಐಂದ್ರಿತಾ ಅವರು ಎನ್ಡಿಟಿವಿಗೆ ತಿಳಿಸಿದ್ದಾರೆ.
ನನ್ನ ತಂದೆ ಓರ್ವ ವೈದ್ಯರು. ಹೀಗಾಗಿ ಅವರು ನನಗೆ ಕೆಲವು ಔಷಧಿಗಳನ್ನು ನೀಡಿದ್ದಾರೆ. ನಿನ್ನೆ ರಾತ್ರಿಯೂ ನಾನು ಸ್ವಲ್ಪ ಹೊಗೆಯನ್ನು ಸೇವಿಸಿದೆ. ಒಂದು ವೇಳೆ ಇಂದು ನನ್ನಲ್ಲಿ ಯಾವುದೇ ಚೇತರಿಕೆ ಕಾಣದಿದ್ದರೆ ನಾನು ನಿಜವಾಗಿಯೂ ಆಸ್ಪತ್ರೆಗೆ ದಾಖಲಾಗಬಹುದು. ಈ ವಿಚಾರವನ್ನು ತಿಳಿಸಲು ಗ್ರೇಟರ್ ಬೆಂಗಳೂರು ಪಾಲಿಕೆಯ ಸಹಾಯವಾಣಿಯನ್ನೂ ಸಂಪರ್ಕಿಸಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಐಂದ್ರಿತಾ ರೈ ಆರೋಪಿಸಿದ್ದಾರೆ.
ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆ ಇರುವ ನಿವಾಸಿಗಳ ಬಗ್ಗೆ ಐಂದ್ರಿತಾ ಅವರು ತುಂಬಾ ಕಳವಳ ವ್ಯಕ್ತಪಡಿಸಿದರು. ಇನ್ನೂ ಎರಡು ಕಸದ ರಾಶಿಗಳನ್ನು ಸುಡಲು ಸಿದ್ಧತೆ ನಡೆದಿದ್ದವು. ನಿಜಕ್ಕೂ ಇದು ತುಂಬಾ ಕಳವಳಕಾರಿಯಾಗಿದೆ. ಉಸಿರಾಟದ ತೊಂದರೆ ಮತ್ತು ಸೂಕ್ಷ್ಮತೆ ಇರುವ ಜನರು ನನ್ನಂತೆಯೇ ಭಾರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೇಳಬೇಕೆಂದರೆ, ನಿವಾಸಿಗಳು ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೆ, ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ ಎಂದು ಐಂದ್ರಿತಾ ಅವರು ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್).