BY Vijayendra | ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿಯಾದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ಚಿತ್ರಕೃಪೆ-BYV-X) 
ರಾಜ್ಯ

ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿಯಾದ ಬಿ ವೈ ವಿಜಯೇಂದ್ರ; ನಡೆದ ಚರ್ಚೆ ಏನು.? | BY Vijayendra

ದೆಹಲಿ/ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭಾನುವಾರ ( ನ.23) ದೆಹಲಿಯಲ್ಲಿ ಭೇಟಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಹಾರದ ಭರ್ಜರಿ ಗೆಲುವಿಗೆ ಶುಭಾಶಯ ತಿಳಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ವಿಜಯೇಂದ್ರ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಮಾನ್ಯ ಅಮಿತ್​ ಷಾ ಅವರನ್ನು ಇಂದು ಭೇಟಿ ಮಾಡಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದ್ದ ಬಿಹಾರ ಚುನಾವಣೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, NDA ಮಿತ್ರಕೂಟ ಐತಿಹಾಸಿಕ ದಿಗ್ವಿಜಯ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿ ಚುನಾವಣಾ ನೈಪುಣ್ಯತೆ ಮೆರೆದ ಮಾನ್ಯ ಅಮಿತ್ ಷಾ ಜಿ ಅವರು ಬಿಜೆಪಿಯ ಕಾರ್ಯಕರ್ತರಿಗೆ ಪ್ರೇರಣಾಶೀಲ ನಾಯಕರಾಗಿದ್ದಾರೆ.
ಇಂದಿನ ಅವರ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಮಾಹಿತಿ ನೀಡಲಾಯಿತು, ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಪಡೆಯಲಾಯಿತು ಎಂದು ಬರೆದುಕೊಂಡಿದ್ದಾರೆ.
ಬಿ ವೈ ವಿಜಯೇಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಂಡಿದ್ದು, ಇತ್ತ ಪಕ್ಷದ ಕೆಲ ನಾಯಕರು ಬಿವೈವಿ ಬದಲಾವಣೆಯ ಪ್ರಯತ್ನಕ್ಕೆ ಒತ್ತಡ ಹೇರುತ್ತಿರುವ ಸಂದರ್ಭದಲ್ಲಿನ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಚುನಾವಣೆಗೂ ಮುಂಚೆ ಇಲ್ಲಿನ ಅಧ್ಯಕ್ಷರ ಆಯ್ಕೆಯಾಗಬಹುದೇ ಎನ್ನುವ ಕುತೂಹಲ ಹಾಗೆಯೇ ಉಳಿದಿದ್ದು, ವಿಜಯೇಂದ್ರ ಆತ್ಮವಿಶ್ವಾಸ ಮತ್ತು ನಡುವಳಿಕೆಯನ್ನು ಗಮನಿಸುತ್ತಿದ್ದರೆ ಅವರೇ ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇತ್ತ ರಾಜ್ಯ ಕಾಂಗ್ರೆಸ್​ನಲ್ಲಿನ ನಾಯಕತ್ವ ಬದಲಾವಣೆಯ ಚರ್ಚೆ, ಡಿನ್ನರ್​ ಮೀಟಿಂಗ್​ ಮತ್ತು ಶಾಸಕರ ದೆಹಲಿಯ ಪರೇಡ್​ ನಡುವೆ, ವಿಜಯೇಂದ್ರ ಅಮಿತ್​ ಷಾರನ್ನು ಭೇಟಿಯಾಗಿರುವುದು ರಾಜ್ಯದಲ್ಲಿ ಪ್ರಮುಖ ಚರ್ಚಾ ವಿಷಯವಾಗಿದ್ದು, ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತಂತೆಯೂ ಕೆಲ ಮಾತುಕತೆಗಳು ನಡೆದಿರುವ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ.