ಹನೂರು ಶೂಟೌಟ್ ಪ್ರಕರಣದ ಮರಣೋತ್ತರ ವರದಿ ಬಿಡುಗಡೆ ಮಾಡಿಲ್ಲ ಏಕೆ? ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ! Hanur Shootout Case  
ರಾಜ್ಯ

ಹನೂರು ಶೂಟೌಟ್ ಪ್ರಕರಣದ ಮರಣೋತ್ತರ ವರದಿ ಬಿಡುಗಡೆ ಮಾಡಿಲ್ಲ ಏಕೆ? ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ! Hanur Shootout Case

ಪ್ರಮುಖ ಮುಖ್ಯಾಂಶಗಳು

  • ಹನೂರು ಶೂಟೌಟ್ ಪ್ರಕರಣದಲ್ಲಿ ಗಂಭೀರ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
  • ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ ಮಾಡದೆ ಸತ್ಯ ಮುಚ್ಚಿಹಾಕಲಾಗುತ್ತಿದೆ ಎಂದು ಆರೋಪ
  • ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಗೆ ವಹಿಸುವಂತೆ ಬಲವಾದ ಆಗ್ರಹ
  • ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ವಿಜಯೇಂದ್ರ ಒತ್ತಾಯ
ಬೆಂಗಳೂರು: ಹನೂರು ಶೂಟೌಟ್ ಪ್ರಕರಣವು ( Hanur Shootout Case ) ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದ್ದು, ಈ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಮೃತದೇಹವನ್ನು ಯಾಕೆ ಇಷ್ಟು ಆತುರವಾಗಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಮತ್ತು ವರದಿ ಏಕೆ ಇನ್ನೂ ಬಿಡುಗಡೆ ಮಾಡಿಲ್ಲ? ಈ ಒಂದು ನಡೆ ಸರ್ಕಾರ ಮತ್ತು ಅರಣ್ಯಾಧಿಕಾರಿಗಳ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಶೂಟೌಟ್​ ಪ್ರಕರಣದ ಫೋಟೋ ಪ್ರದರ್ಶಿಸಿ ಮಾತನಾಡಿದ ವಿಜಯೇಂದ್ರ ಅವರು, ಭುಜದ ಹಾಗೂ ಕತ್ತಿನ ಹಿಂಭಾಗದಲ್ಲಿ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂದು ವೈದ್ಯಕೀಯ ತಜ್ಞರ ಅಭಿಪ್ರಾಯವಿದ್ದು, ಮರಣೋತ್ತರ ಪರೀಕ್ಷೆ ವರದಿಯನ್ನು ಮುಚ್ಚಿಹಾಕುವ ಮತ್ತು ಸತ್ಯವನ್ನು ಮರೆಮಾಚುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿರುವವರು ಹ್ಯಾಬಿಚ್ಯುಯಲ್ ಅಪರಾಧಿಗಳಲ್ಲ ಎಂದ ಅವರು, ಈ ಪ್ರಕರಣದ ಮುಖ್ಯ ಸಾಕ್ಷಿಯಾಗಿರುವ ಮಹಿಮಾದಾಸ್ ಎನಿಸಿಕೊಂಡವನನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ಬಚ್ಚಿಟ್ಟಿವೆ ಎಂದು ವಿಜಯೇಂದ್ರ ಅವರು ದೂರಿದ್ದಾರೆ.
ತಜ್ಞರ ಪ್ರಕಾರ ಇದು ಲಾಂಗ್ ರೆಂಜ್​​ನಲ್ಲಿ ಗುಂಡು ಹೊಡೆದಿದ್ದಲ್ಲ, ತುಂಬಾ ಹತ್ತಿರದಿಂದ ಗುಂಡು ಹೊಡೆದಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಉಲ್ಲೇಖ ಮಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಅಕ್ರಮ ನಡೆಯುತ್ತಿತ್ತಾ? ಅದು ಎನ್​ಕೌಂಟರ್​​​ಗೆ ಗುರಿಯಾದವರಿಗೆ ಗೊತ್ತಿತ್ತಾ? ಅದಕ್ಕಾಗಿ ಅವರನ್ನು ಶೂಟೌಟ್ ಮಾಡಲಾಯಿತಾ? ಇದು ಸರ್ಕಾರದ ಪ್ರಾಯೋಜಿತ ಕೊಲೆಯಾ? ಎಂಬುದರ ಬಗ್ಗೆ ಚರ್ಚೆ ಆಗ್ತಿದೆ ಎಂದು ವಿಜಯೇಂದ್ರ ಹೇಳಿದರು.
ಅಲ್ಲದೆ, ಸ್ಥಳೀಯ ಸಂಸದ ಸುನೀಲ್ ಬೋಸ್ ಹಾಗೂ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳದ್ದು ತಪ್ಪು ಎಂದು ಆರಂಭದಲ್ಲಿ ಹೇಳಿದ್ದರೂ, ನಂತರ ಸದನದಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಸಂಪೂರ್ಣ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

1 ಕೋಟಿ ರೂ. ಪರಿಹಾರಕ್ಕೆ ಆಗ್ರಹ

ಹನೂರು ಶೂಟೌಟ್ ಪ್ರಕರಣದಲ್ಲಿ ಹಲವು ಗಂಭೀರ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಯಾಕೆ ಇನ್ನೂ ಬಿಡುಗಡೆ ಮಾಡಿಲ್ಲ ಮತ್ತು ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನೇಕೆ ನಡೆಯುತ್ತಿದೆ ಎಂದು ಪ್ರಶ್ನಿಸಿರುವ ಅವರು, ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಸಂಪೂರ್ಣ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ (CBI) ತನಿಖೆಗೆ ವಹಿಸುವಂತೆ ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ, ಚಿಕ್ಕಮಗಳೂರು ನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಪ್ರಕರಣವನ್ನು ಪ್ರಸ್ತಾಪಿಸಿದ ವಿಜಯೇಂದ್ರ ಅವರು, ರಾಜ್ಯದಲ್ಲಿ ಕಾನೂನು ಮತ್ತು ಗೃಹ ಸಚಿವರು ಇದ್ದರೆ, ಇಂತಹ ದೇಶದ್ರೋಹದ ಕೆಲಸ ಮಾಡಿದವರನ್ನು ಒದ್ದು ಒಳಗೆ ಹಾಕಿ ತಮ್ಮ ತಾಕತ್ತು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಹಿಂದೂಗಳಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕಾದರೆ ಕಠಿಣ ಕ್ರಮ ಕೈಗೊಂಡು, ಆರೋಪಿಗಳು ಬೆಲ್ ಮೇಲೂ ಹೊರಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.