ಎಚ್.ಸಿ. ತಮ್ಮೇಶ್‌ಗೌಡ  
ರಾಜ್ಯ

ಮೊದಲ ದಿನ 16 ಸಾವಿರ ಮನೆಗಳಿಗೆ ಬಿಜೆಪಿ ಬಾವುಟ ಕಟ್ಟಿ ದಾಖಲೆ-BJP

ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್‌ಗೌಡ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ 14 ವಾರ್ಡ್‌ಗಳಲ್ಲಿ ‘ನಾನು ಮೋದಿ ನಾನು ಬಿಜೆಪಿ’ ಎಂಬ ಸಂಕಲ್ಪದೊಂದಿಗೆ ಮನೆಗಳ ಮೇಲೆ ಬಿಜೆಪಿ ಬಾವುಟ ಕಟ್ಟುವ ವಿನೂತನ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಅಭಿಯಾನದ ಮೊದಲ ದಿನ ಅಂದಾಜು 16 ಸಾವಿರ ಮನೆಗಳ ಮೇಲೆ ಬಾವುಟ ಕಟ್ಟುವ ಮೂಲಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದಾಖಲೆ ಸೃಷ್ಟಿಸಿದ್ದಾರೆ.
ಈ ಕುರಿತು ತಮ್ಮೇಶ್‌ಗೌಡ ಮಾತನಾಡಿ ‘ಯಾವುದೇ ರಾಜಕೀಯ ಪಕ್ಷ ಸುಭದ್ರವಾಗಿ ಬೆಳೆಯಲು ಕಾರ್ಯಕರ್ತರು ಪಕ್ಷದ ತತ್ವ,ಸಿದ್ಧಾಂತವನ್ನು ದೃಢಸಂಕಲ್ಪದೊಂದಿಗೆ ಅಳವಡಿಸಿಕೊಳ್ಳಬೇಕು.ನಮ್ಮ ಕ್ಷೇತ್ರದಲ್ಲಿ ಸಹಸ್ರಾರು ಮುಖಂಡರು, ಕಾರ್ಯಕರ್ತರ ಬಲವಿದೆ. ಪಕ್ಷ ಕೈಗೊಳ್ಳುವ ಯಾವುದೇ ತೀರ್ಮಾನ, ಸೂಚಿಸುವ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಒಪ್ಪಿಕೊಳ್ಳುವ ಮನಸ್ಥಿತಿಯುಳ್ಳ ಕಾರ್ಯಕರ್ತರನ್ನು ಪಡೆದಿರುವುದು ನಾವೇ ಧನ್ಯರು ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಕ್ಷೇತ್ರದ ಪ್ರತಿ ಮನೆಗೆ ತಿಳಿಸುವುದು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಕಾರ್ಯವೈಫಲ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕ್ಷೇತ್ರದಲ್ಲಿ ಬೃಹತ್ ಅಭಿಯಾನ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳ ಮೇಲೆ ಬಾವುಟ ಕಟ್ಟುವ ಮೂಲಕ ನಮ್ಮ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಲಿ ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಹೇಳಿದರು.