ದ್ವಿಭಾಷಾ ನೀತಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅನ್ವಯವಾಗಲಿವೆಯೇ ಇಲ್ಲವೇ ? 
ರಾಜ್ಯ

ದ್ವಿಭಾಷಾ ನೀತಿ ಗೊಂದಲ: ಇದೊಂದು ಸಮಸ್ಯೆ ಬಗೆಹರಿದರೆ ವಿಚಾರ ಇತ್ಯರ್ಥ

ಎನ್.ಎಲ್. ಶಿವಮಾದು

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ಕೇವಲ ಒಂದು ಭಾಷೆಯಾಗಿ ಕಲಿಸಿಕೊಡಬೇಕಾ ಅಥವಾ ಪರೀಕ್ಷೆಗೆ ಸಿದ್ಧಗೊಳಿಸುವಷ್ಟು ಗಂಭೀರವಾಗಿ ಬೋಧನೆ ಮಾಡಬೇಕಾ ಎಂಬ ಗೊಂದಲ
  • ಸಿಬಿಎಸ್‌ಇ ಶಾಲೆಗಳಲ್ಲಿ ತೃತೀಯ ಭಾಷೆಯನ್ನು ಕಡ್ಡಾಯ ಮಾಡಿರುವುದರಿಂದ ರಾಜ್ಯಪಠ್ಯಕ್ರಮ ಶಾಲೆಗಳಲ್ಲಿಯೂ ತೃತೀಯ ಭಾಷೆಯನ್ನು ಬೋಧನೆಯಾಗಲಿದೆಯೇ ಇಲ್ಲವೇ ದ್ವಿಭಾಷಾ ನೀತಿ ಜಾರಿಯಾಗಲಿದೆಯೇ
  • ಭಾಷಾ ನೀತಿಯನ್ನು ಅನುಷ್ಠಾನ ಮಾಡಲು ಯಾವ ಇಲಾಖೆ ನಿಯಮಾವಳಿಗಳನ್ನು ಸಿದ್ಧಪಡಿಸಬೇಕು ಎಂಬ ಗೊಂದಲವಿದೆ.
  • ಭಾಷಾ ನೀತಿ ಜಾರಿ ಮಾಡಿದರೆ, ಸ್ಥಳೀಯ ಭಾಷೆ ಮಾತುನಾಡುವವರಿಗೆ ಇದರಿಂದ ಏನೆಲ್ಲ ಅನುಕೂಲವಾಗಲಿವೆ. ಹೊರ ರಾಜ್ಯದವರಿಗೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ.
  • ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ.ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿಯಲ್ಲಿಯೂ ದ್ವಿಭಾಷಾ ನೀತಿಯನ್ನೇ ಶಿಫಾರಸು ಮಾಡಿದೆ.
ಎನ್.ಎಲ್. ಶಿವಮಾದು
ಬೆಂಗಳೂರು: ಮುಂದಿನ ಒಂದು ವಾರದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಆರಂಭವಾಗಲಿವೆ. ಆದರೆ, ರಾಜ್ಯ ಶಿಕ್ಷಣ ನೀತಿ ಮತ್ತು ದ್ವಿಭಾಷಾ ನೀತಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅನ್ವಯವಾಗಲಿವೆಯೇ ಇಲ್ಲವೇ ಎಂಬ ಆತಂಕದಲ್ಲಿಯೇ ಶಾಲೆಗಳು ಆರಂಭವಾಗಬೇಕಿದೆ.
ಕಳೆದ ಮಾರ್ಚ್/ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೇ ಘಳಿಗೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತದೆ. ಕಲಿಕೆಗೆ ಸೀಮಿತವಾಗಲಿದೆ ಎಂಬುದಾಗಿ ಸರ್ಕಾರ ಘೋಷಿಸಿತು. ಪ್ರಕರಣವು ನ್ಯಾಯಾಲಯಕ್ಕೆ ಮೆಟ್ಟಿಲೇರಿದ್ದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿ ನ್ಯಾಯಾಲಯದ ಆದೇಶದಂತೆ ಅಂಕಗಳನ್ನು ನೀಡಲಾಯಿತು. ಆ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮಾಡುವುದಾಗಿ ಪ್ರಕಟಿಸಿದ್ದರು.

ಶಿಕ್ಷಕ ವರ್ಗದಲ್ಲಿ ಗೊಂದಲ:

ಆದರೆ, ಸರ್ಕಾರವು ಈ ಬಗ್ಗೆ ಚಕಾರ ಎತ್ತಿಲ್ಲ. ಇದರಿಂದ ಶಾಲೆಯಲ್ಲಿ ತೃತೀಯ ಭಾಷೆಯನ್ನು ಹೇಗೆ ಬೋಧಿಸಬೇಕೆಂಬ ಗೊಂದಲದಲ್ಲಿ ಶಿಕ್ಷಕ ವರ್ಗವಿದೆ. ಅಂದರೆ, ಮಕ್ಕಳಿಗೆ ಕೇವಲ ಒಂದು ಭಾಷೆಯಾಗಿ ಕಲಿಸಿಕೊಡಬೇಕಾ ಅಥವಾ ಪರೀಕ್ಷೆಗೆ ಸಿದ್ಧಗೊಳಿಸುವಷ್ಟು ಗಂಭೀರವಾಗಿ ಬೋಧನೆ ಮಾಡಬೇಕಾ ಎಂಬ ಗೊಂದಲವಿದೆ ಎನ್ನುತ್ತಾರೆ ಶಿಕ್ಷಕ ಗೋವಿಂದ್.
ಅಲ್ಲದೆ, ಸಿಬಿಎಸ್‌ಇ ಶಾಲೆಗಳಲ್ಲಿ ತೃತೀಯ ಭಾಷೆಯನ್ನು ಕಡ್ಡಾಯ ಮಾಡಿರುವುದರಿಂದ ರಾಜ್ಯಪಠ್ಯಕ್ರಮ ಶಾಲೆಗಳಲ್ಲಿಯೂ ತೃತೀಯ ಭಾಷೆಯನ್ನು ಬೋಧನೆಯಾಗಲಿದೆಯೇ ಇಲ್ಲವೇ ದ್ವಿಭಾಷಾ ನೀತಿ ಜಾರಿಯಾಗಲಿದೆಯೇ ಎಂಬುದರ ಕುರಿತು ಯಾರನ್ನೂ ಕೇಳದಂತಾಗಿದೆ. ಈ ಗೊಂದಲಗಳಿಗೆ ಸರ್ಕಾರವೇ ತೆರೆ ಎಳೆಯಬೇಕಿದೆ. ಆದಷ್ಟು ಬೇಗ ಇದರ ಬಗ್ಗೆ ಸ್ಪಷ್ಟತೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಯ್ದೆಯನ್ನು ಯಾರು ರೂಪಿಸಬೇಕೆಂಬ ಗೊಂದಲ

ದ್ವಿಭಾಷಾ ನೀತಿಯು ಕೇವಲ ಶಿಕ್ಷಣ ಇಲಾಖೆಗೆ ಮಾತ್ರ ಸೀಮಿತವಾಗದೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ವ್ಯಾಪ್ತಿಗೂ ಬರಲಿದೆ. ಹೀಗಾಗಿ, ಒಂದು ವೇಳೆ ಭಾಷಾ ನೀತಿಯನ್ನು ಅನುಷ್ಠಾನ ಮಾಡಲು ಯಾವ ಇಲಾಖೆ ನಿಯಮಾವಳಿಗಳನ್ನು ಸಿದ್ಧಪಡಿಸಬೇಕು ಎಂಬ ಗೊಂದಲವಿದೆ. ಭಾಷಾ ನೀತಿ ಜಾರಿ ಮಾಡಿದರೆ, ಸ್ಥಳೀಯ ಭಾಷೆ ಮಾತುನಾಡುವವರಿಗೆ ಇದರಿಂದ ಏನೆಲ್ಲ ಅನುಕೂಲವಾಗಲಿವೆ. ಹೊರ ರಾಜ್ಯದವರಿಗೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ. ದ್ವಿಭಾಷಾ ನೀತಿ ಜಾರಿಯಲ್ಲಿರುವ ತಮಿಳುನಾಡು ಹಾಗೂ ಹಿಂದಿ ರಾಷ್ಟ್ರಗಳಲ್ಲಿ ಯಾವ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂಬೆಲ್ಲ ಮಾನದಂಡಗಳನ್ನು ಸಂಶೋಧನೆ ಮಾಡಿದ ಬಳಿಕ ರಾಜ್ಯದಲ್ಲಿ ಭಾಷಾ ನೀತಿಯನ್ನು ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಯು ಉನ್ನತ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಭಾಷಾ ನೀತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸುಬೇಕು ಎಂಬ ಅಭಿಪ್ರಾಯವಾಗಿದೆ.

ಎಸ್‌ಇಪಿಯೂ ದ್ವಿಭಾಷಾ ನೀತಿಯೇ ಶಿಫಾರಸು

ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ.ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿಯಲ್ಲಿಯೂ ದ್ವಿಭಾಷಾ ನೀತಿಯನ್ನೇ ಶಿಫಾರಸು ಮಾಡಿದೆ. ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ದ್ವಿಭಾಷಾ ಶಿಕ್ಷಣನ್ನು ಕಡ್ಡಾಯಗೊಳಿಸುವಂತೆ ಶಿಾರಸು ಮಾಡಿದೆ.
ಈ ದೃಷ್ಟಿಯಿಂದ ನೋಡುವುದಾದರೆ, ದ್ವಿಭಾಷಾ ನೀತಿಯು ಕೇವಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಷ್ಟೇ ಅನ್ವಯವಾಗದೆ, ಇಡೀ ಶಾಲಾ ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಹ ವಿಷಯವಾಗಿದೆ. ಈ ಎಲ್ಲ ಕಾರಣಗಳಿಂದ ತುರ್ತಾಗಿ ಸರ್ಕಾರವು ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳ ಕಲಿಕೆ ಮತ್ತು ರಾಜ್ಯದ ನಾಡು-ನುಡಿ ದೃಷ್ಟಿಯಿಂದಲೂ ಒಳಿತಾಗಲಿದೆ ಎಂಬುದು ಶಿಕ್ಷಣ ತಜ್ಞರು, ಪಾಲಕರ ಒಮ್ಮತದ ಅಭಿಪ್ರಾಯವಾಗಿದೆ.

ಗೃಹ ಸಚಿವರ ನೇತೃತ್ವದಲ್ಲಿ ಉಪ ಸಮಿತಿ ರಚನೆ

2025ರ ಆಗಸ್ಟ್ 8ರಂದು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿದ್ದು, 9 ತಿಂಗಳು ಕಳೆದಿವೆ. ಈಗ ವರದಿಯನ್ನುಅನುಷ್ಠಾನ ಮಾಡುವ ಸಂಬಂಧ ಕ್ರಮ ಕೈಗೊಂಡಿದೆ. ಅಂತಿಮ ವರದಿಯನ್ನು ಪರಾಮರ್ಶಿಸಿ ಸೂಕ್ತ ಶಿಾರಸುಗಳನ್ನು ಮಾಡುವಂತೆ ಕೋರಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ.
ಅಂತಿಮ ವರದಿಯು 2,197 ಪುಟಗಳಷ್ಟು ಬೃಹತ್ತಾಗಿದೆ. ಇದನ್ನು ಪರಾಮರ್ಶಿಸಿದ ಬಳಿಕ ಸರ್ಕಾರಕ್ಕೆ ಶಿಾರಸುಗಳನ್ನು ಮಾಡಬೇಕಿದೆ.
"

ಎಸ್‌ಇಪಿಯನ್ನು ಈಗಾಗಲೇ ಎರಡು ಬಾರಿ ಕ್ಯಾಬಿನೆಟ್ ಅಜೆಂಡಾದಲ್ಲಿ ಪ್ರಕಟಿಸಲಾಗಿದ್ದು, ಚರ್ಚೆ ಸಾಧ್ಯವಾಗಿಲ್ಲ. ಸಾಧ್ಯವಾಷ್ಟು ಬೇಗ ಜಾರಿ ಮಾಡುವ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಲಿದೆ.

- ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ