ಮಹಿಳಾ ಪಿಎಸ್‌ಐ ಕಪಾಳಮೋಕ್ಷ ಪ್ರಕರಣದ ಆರೋಪಿ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ 
ರಾಜ್ಯ

ಮಹಿಳಾ PSI ಮೇಲೆ ಕಪಾಳಮೋಕ್ಷ ಪ್ರಕರಣ: ಶಾಸಕ ಸುರೇಶ್​ ಗೌಡ ಪುತ್ರಿ ಐಶ್ವರ್ಯಾಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ ಮಾಡಿ ನ್ಯಾಯಾಲಯ ಆದೇಶ! Aishwarya

ಮಂಡ್ಯ: ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಾಲಯದಲ್ಲಿದ್ದ ಕರ್ತವ್ಯ ನಿರತ ಮಹಿಳಾ ಸಬ್​ ಇನ್ಸ್​​ಪೆಕ್ಟರ್​ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತುಮಕೂರು ಶಾಸಕ ಸುರೇಶ್‌ಗೌಡ ಪುತ್ರಿ, ಐಶ್ವರ್ಯಾ (Aishwarya) ಗೆ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಐಶ್ವರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಶ್ರೀರಂಗಪಟ್ಟಣದ 3ನೇ ಅಪರ ಸತ್ರ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾ ಮಾಡಿ ಆದೇಶಿಸಿದೆ.
ಆಗಸ್ಟ್​ 12 ರ ಭೀಮನ ಅಮವಾಸ್ಯೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಸರೇಶ್​ ಗೌಡ ಪುತ್ರಿ ಐಶ್ವರ್ಯ, ಬಂದೋಬಸ್ತ್​ನಲ್ಲಿ ನಿರತರಾಗಿದ್ದ ಮಹಿಳಾ ಪಿಎಸ್ಐ ಸವಿತಾ ಬಿ ಎನ್ನುವವರ ಮೇಲೆ ಕಪಾಳಮೋಕ್ಷ ಮಾಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತಂತೆ ಪ್ರಕರಣ ದಾಖಲಾಗಿದ್ದರೂ ಶಾಸಕರ ಪುತ್ರಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಇಂದು ಪ್ರಕರಣದಿಂದ ಮುಕ್ತಿ ಪಡೆಯಲು ಮುಂದಾಗಿದ್ದ ಐಶ್ವರ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ದೇವಸ್ಥಾನದಲ್ಲಿ ಆಗಿದ್ದೇನು?
ಆಗಸ್ಟ್​ 12 ರ ಭೀಮನ ಅಮವಾಸ್ಯೆ ದಿನ ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಾಲಯಕ್ಕೆ ಶಾಸಕರ ಪುತ್ರಿ ಐಶ್ವರ್ಯ ಬೇಟಿ ನೀಡಿದ್ದರು. ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಂತರೂ ದೇವರ ದರ್ಶನಕ್ಕೆ ವಿಳಂಬವಾಗಿದೆ. ಆಗ ಅಲ್ಲಿದ್ದ ಮಹಿಳಾ ಪೊಲೀಸ್​ ಜೊತೆಗೆ ವಾಗ್ವಾದಕ್ಕೆ ಐಶ್ವರ್ಯ ಇಳಿದಿದ್ದಾರೆ.
ಮಹಿಳಾ ಪೊಲೀಸ್ ಕೂಡ ಏರು ಧ್ವನಿಯಲ್ಲಿ ಗದರಿದ ಹಿನ್ನಲೆ ತಾಳ್ಮೆ ಕಳೆದುಕೊಂಡ ಐಶ್ವರ್ಯ ಕರ್ತವ್ಯನಿರತ ಅಧಿಕಾರಿ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಇದು ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ವಿವಾದವಾಗಿ ಪರಣಮಿಸಿದೆ.

ಕ್ಷಮೆ ಕೇಳಿದ ಶಾಸಕ!

ನನ್ನ ಮಗಳು ತಪ್ಪು ಮಾಡಿದ್ದರೆ ಕಾನೂನಿನ ಮೂಲಕ ಶಿಕ್ಷೆಯಾಗಲಿ. ನಾವು ಸಾವರ್ಜನಿಕ ಜೀವನದಲ್ಲಿರುವಾಗ ಸ್ಥಿಮಿತ ಕಳೆದುಕೊಳ್ಳಕೊಡದು. ಭೀಮನ ಅಮಾವಾಸ್ಯೆ ಹಿನ್ನೆಲೆ ಮಗಳು ದೇವಸ್ಥಾನಕ್ಕೆ ತನ್ನ ಮಕ್ಕಳೊಂದಿಗೆ ತೆರಳಿದ್ದಳು.
ಪೊಲೀಸರು ಕರ್ತವ್ಯದಲ್ಲಿರುವಾಗ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಆದರೆ ನಾವು ಅಹಂಕಾರ ಪಡಬಾರದು ತಾಳ್ಮೆ ಕಳೆದುಕೊಳ್ಳಬಾರದು. ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ. ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ಶಿಕ್ಷೆ ಸಿಗಲಿ. ನಾವು ಮತ್ತು ನಮ್ಮ ಕುಟುಂಬದವರೆಲ್ಲರೂ ದೈವಭಕ್ತರು, ಹೀಗೆ ಆಗಬಾರದಿತ್ತು ಎಂದಿದ್ದಾರೆ.