ಜೊಮಾಟೊ ಪಾವ್ ಭಾಜಿ ಜೊತೆ ಬೀಡಿ ಸಿಕ್ಕ ವೈರಲ್ ಫೋಟೋ
ಬೆಂಗಳೂರು: ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ ತಿಂದ ಅನುಭವ ಕೆಲವೊಮ್ಮೆ ಬೇಸರ ತರಿಸಿದರೆ, ಇನ್ನು ಕೆಲವು ಬಾರಿ ತಲೆಬಿಸಿ ಮಾಡುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೊಮಾಟೊದಲ್ಲಿ ಪಾವ್ ಭಾಜಿ ಆರ್ಡರ್ ಮಾಡಿದ ಗ್ರಾಹಕನೊಬ್ಬನಿಗೆ ತಟ್ಟೆಯಲ್ಲಿ ಕತ್ತರಿಸಿದ ಈರುಳ್ಳಿಯೊಂದಿಗೆ 'ಬೀಡಿ' (Bidi in Pav Bhaji) ಕೂಡ ಉಚಿತವಾಗಿ ಸಿಕ್ಕಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಬೆಂಗಳೂರು ಮೂಲದ ಪ್ರಿಯಮ್ ತಹಬಿಲ್ದರ್ ಎಂಬುವವರು ಜೊಮಾಟೊ ಮೂಲಕ ಪಾವ್ ಭಾಜಿ ಆರ್ಡರ್ ಮಾಡಿದ್ದರು. ಬಿಸಿ ಬಿಸಿಯಾದ ಊಟ ಬರುತ್ತದೆ ಎಂದು ಕಾದಿದ್ದ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಆರ್ಡರ್ ಬಾಕ್ಸ್ ಓಪನ್ ಮಾಡಿ ನೋಡಿದರೆ, ಪಾವ್ ಭಾಜಿ ಜೊತೆ ನೀಡಿದ್ದ ಕತ್ತರಿಸಿದ ಈರುಳ್ಳಿಯ ಮೇಲೆ ಬಳಸಿದ ಬೀಡಿಯೊಂದು ಕಣ್ಣಿಗೆ ಬಿದ್ದಿದೆ. ಅದನ್ನು ನೋಡಿದ ತಕ್ಷಣ ಅವರಿಗೆ ಅಚ್ಚರಿಯ ಜೊತೆಗೆ ಅಸಹ್ಯವೂ ಆಗಿದೆ.
ಈ ವಿಚಿತ್ರ ಅನುಭವವನ್ನು ಪ್ರಿಯಮ್ ತಹಬಿಲ್ದರ್ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಜೊಮಾಟೊದಿಂದ ಪಾವ್ ಭಾಜಿ ಆರ್ಡರ್ ಮಾಡಿದೆ, ಜೊತೆಗೆ ಉಚಿತವಾಗಿ ಬೀಡಿ ಸಿಕ್ಕಿತು. ಆದರೆ ಅದು ಕೂಡ ಬಳಸಿರುವ ಬೀಡಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ನೆಟ್ಟಿಗರ ತಮಾಷೆ ಹಾಗೂ ಆಕ್ರೋಶ
ಈ ಪೋಸ್ಟ್ ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಎರಡು ಗುಂಪಾಗಿ ವಿಂಗಡನೆಗೊಂಡಿದ್ದಾರೆ. ಕೆಲವರು ಆಹಾರ ಭದ್ರತೆ ಮತ್ತು ರೆಸ್ಟೋರೆಂಟ್‌ಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದನ್ನು ಹಾಸ್ಯದ ರೂಪದಲ್ಲಿ ತೆಗೆದುಕೊಂಡಿದ್ದಾರೆ.
ಒಬ್ಬ ಬಳಕೆದಾರ ಪಾವ್ ಭಾಜಿಗೆ ಹೆಚ್ಚುವರಿಯಾಗಿ ಸ್ಮೋಕಿ ಫ್ಲೇವರ್ ಸೇರಿಸಲಾಗಿದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಇಂದಿನ ಯುವಪೀಳಿಗೆಯ ಸಮಸ್ಯೆ ಎಂದರೆ ಅವರು ಯಾವುದೇ ವಿಷಯದಲ್ಲೂ ಒಳ್ಳೆಯದನ್ನು ನೋಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರಂತೂ ಹೊರಗಿನ ತಿಂಡಿ ಬಿಟ್ಟು ಮನೆಯಲ್ಲೇ ಅಡುಗೆ ಮಾಡಿ ತಿನ್ನುವ ಕಾಲ ಬಂತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಝೊಮ್ಯಾಟೊ ಕೊಟ್ಟ ಆಫರ್ ಏನು?
ಈ ಘಟನೆಯ ಬಳಿಕ ಗ್ರಾಹಕ ಬೆಂಬಲ ತಂಡ ಪ್ರಿಯಮ್ ಅವರನ್ನು ಸಂಪರ್ಕಿಸಿ ಕ್ಷಮೆ ಯಾಚಿಸಿದೆ. ಅಷ್ಟೇ ಅಲ್ಲದೆ, ಮುಂದಿನ ಆರ್ಡರ್‌ಗಾಗಿ 100 ರೂಪಾಯಿ ಮೌಲ್ಯದ ಕೂಪನ್ ನೀಡಿದೆ ಎಂದು ಪ್ರಿಯಮ್ ಮತ್ತೊಂದು ಪೋಸ್ಟ್ ಮೂಲಕ ಅಪ್‌ಡೇಟ್ ಮಾಡಿದ್ದಾರೆ.
ಆದರೆ ಇಲ್ಲಿ ಅಂತಿಮವಾಗಿ ಯಾರದ್ದು ತಪ್ಪು ಎಂಬ ಚರ್ಚೆಯೂ ಜೋರಾಗಿದೆ. ಜೊಮಾಟೊ ಎನ್ನುವುದು ಕೇವಲ ಆಹಾರ ತಲುಪಿಸುವ ವೇದಿಕೆ ಮಾತ್ರ, ಅಡುಗೆ ಮಾಡುವುದು ರೆಸ್ಟೋರೆಂಟ್. ಹೀಗಾಗಿ ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವು ನೆಟ್ಟಿಗರು ವಾದಿಸಿದ್ದಾರೆ, (ಏಜನ್ಸೀಸ್).