Bidadi Township  
ರಾಜ್ಯ

Bidadi Township ವಿವಾದ; ಉಭಯ ನಾಯಕರ ನಡುವೆ ’ಪತ್ರ ವ್ಯವಹಾರ': ಸಿಎಂ ಆಹ್ವಾನಕ್ಕೆ ಹೆಚ್‌ಡಿಕೆ ಕೊಟ್ಟ ಉತ್ತರ ಏನು?

ಬೆಂಗಳೂರು: ಬಿಡದಿ ಟೌನ್‌ಶಿಪ್‌(Bidadi Township ) ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ವಿಧಾನಸೌಧಕ್ಕೆ ಆಹ್ವಾನಿಸಿದ ಬೆನ್ನಲ್ಲೇ ರಾಜಕೀಯವಾಗಿ ಹೊಸ ತಿರುವು ಸಿಕ್ಕಿದೆ. ವಿಧಾನಸೌಧದಲ್ಲಿ ಚರ್ಚೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿರುವ ಕುಮಾರಸ್ವಾಮಿ, ಯೋಜನೆಯಿಂದ ಬಾಧಿತರಾಗಿರುವ ರೈತರ ಸಮ್ಮುಖದಲ್ಲೇ ರಾಮನಗರ ಜಿಲ್ಲೆಯ ಬೈರಮಂಗಲದಲ್ಲಿ ಬಹಿರಂಗ ಚರ್ಚೆ ನಡೆಸೋಣ ಎಂದು ಸಿಎಂಗೆ ಪ್ರತಿಸವಾಲು ಹಾಕಿದ್ದಾರೆ.

ಸಿಎಂ ಬರೆದ ಪತ್ರದಲ್ಲೇನಿದೆ?

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, 26.06.2026ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ ಎಂದು ಎಚ್​​​ಡಿಕೆಗೆ ಸಿಎಂ ಡಿಕೆಶಿ ಪತ್ರ ಬರೆದಿದ್ದಾರೆ. ಈವರೆಗೆ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಉಭಯ ನಾಯಕರು ಪರಸ್ಪರ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದಾರೆ.

ಸಿಎಂ ಆಹ್ವಾನಕ್ಕೆ ಪತ್ರದ ಮೂಲಕ ಎಚ್​​ಡಿಕೆ ಉತ್ತರ

ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಜೂನ್‌ 26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿಗೆ ಪತ್ರ ಬರೆದು ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಈ ವಿಷಯವು ತಮ್ಮೊಬ್ಬರ ಸಮಸ್ಯೆಯಲ್ಲ, ಸಾವಿರಾರು ರೈತರ ಬದುಕಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದಕ್ಕಿಂತ, ನೊಂದ ರೈತರ ನಡುವೆ ತೆರಳಿ ಚರ್ಚೆ ನಡೆಸುವುದು ಸೂಕ್ತ ಎಂದಿದ್ದಾರೆ.

ಬೈರಮಂಗಲದಲ್ಲೇ ಮುಕ್ತ ಚರ್ಚೆಗೆ ಒತ್ತಾಯ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕುಮಾರಸ್ವಾಮಿ, "ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ" ಎಂದು ಹೇಳಿದ್ದಾರೆ. ಬಿಡದಿ ಟೌನ್‌ಶಿಪ್‌ ಯೋಜನೆಯಿಂದ ರೈತರು, ಗ್ರಾಮಸ್ಥರು ಹಾಗೂ ಸ್ಥಳೀಯ ಜನರ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಅವರ ಸಮ್ಮುಖದಲ್ಲೇ ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸೂಚಿಸಿರುವ ಜೂನ್‌ 26ರ ದಿನಾಂಕದಂದು ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ ಚರ್ಚೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಅದರ ಬದಲು ಜೂನ್‌ 27ರಂದು ಯಾವುದೇ ಸಮಯದಲ್ಲಿ ಬೈರಮಂಗಲದಲ್ಲಿ ಸಭೆ ಆಯೋಜಿಸಿದರೆ ತಾವು ಭಾಗವಹಿಸಲು ಸಿದ್ಧ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದಿನಾಂಕ ನಿಗದಿ ಮಾಡುವಂತೆ ಮನವಿ

ಜೂನ್‌ 27ರಂದು ರೈತರ ಸಮ್ಮುಖದಲ್ಲಿ ಮುಕ್ತ ಸಭೆ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಆ ದಿನದ ಸಮಯವನ್ನು ನಿಗದಿ ಮಾಡಿ ತಿಳಿಸುವರೆಂದು ನಿರೀಕ್ಷಿಸಿರುವುದಾಗಿ ಅವರು ಹೇಳಿದ್ದಾರೆ. ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರವಾಗಿ ಈಗಾಗಲೇ ರಾಜಕೀಯ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಸಿಎಂ ಆಹ್ವಾನ ಮತ್ತು ಕುಮಾರಸ್ವಾಮಿ ಪ್ರತಿಕ್ರಿಯೆಯಿಂದ ಈ ವಿವಾದ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.