ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ 2008 ಜುಲೈ 10ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಈ ಹಿಂದಿನ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸೋಮವಾರ(ನ. 09) ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಬಿಡಿಎ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಡಿಎ 50ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ತಿ ದಾಖಲೆಗಳಿಲ್ಲದ ಭೂ ಮಾಲಿಕರಿಗೆ ಭೂ ಗ್ಯಾರಂಟಿ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
ಈ ಸೌಲಭ್ಯ ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದ್ದು, ಡಿಸೆಂಬರ್ 17 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಅವಧಿಯೊಳಗಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
2008ಕ್ಕಿಂತ ಮುಂಚೆ ಮನೆ ಕಟ್ಟಿದವರಿಗೆ, ಸುಮಾರು 1 ಲಕ್ಷ ಮಾಲಿಕರಿಗೆ ಆಸ್ತಿ ದೊರಕಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರ ಅವಕಾಶ ನೀಡಿತು. 2021ರಲ್ಲಿಯೇ ದರ ನಿಗದಿ ಮಾಡಿತ್ತು. ಆದರೆ ಶುಲ್ಕ ಹೆಚ್ಚಾಯಿತೆಂದು ಕೇವಲ 600 ಜನ ಮಾತ್ರ ಅರ್ಜಿ ಹಾಕಿದ್ದರು. ಆದರೆ ನಾವು ಶುಲ್ಕ ಕಡಿಮೆ ಮಾಡಿ ಇನ್ನೊಂದು ಅವಕಾಶ ನೀಡಿದ್ದೇವೆ. ಕ್ಲೀನ್ ಬಿಡಿಎ, ಪರಿಶುದ್ಧವಾದ ಆಡಳಿತವನ್ನು ಬೆಂಗಳೂರಿಗರಿಗೆ ನೀಡುವ ಉದ್ದೇಶದಿಂದ ಸರ್ಕಾರ ಈ ಸೌಲಭ್ಯವನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.
ನಿಗದಿತ ಅವಧಿಯ ಒಳಗಾಗಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ, ಈ ಸೌಲಭ್ಯವನ್ನು ಬಳಸಿಕೊಂಡು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಮೂಲ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20x30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು, 20x30 ಕ್ಕಿಂತ ಹೆಚ್ಚು ಮತ್ತು 30x40 ರವರೆಗೆ ಶೇ.12.5% ರಷ್ಟು, 30x40 ಕ್ಕಿಂತ ಹೆಚ್ಚು ಮತ್ತು 40x60 ರವರೆಗೆ ಶೇ.20% ರಷ್ಟು ಮತ್ತು 40x60 ಕ್ಕಿಂತ ಹೆಚ್ಚು ಮತ್ತು 50x80 ರವರೆಗೆ ಶೇ.25% ರಷ್ಟು ದರವನ್ನು ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ.50ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ.
ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ವ್ಯಾಜ್ಯವಿಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30x40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೋತ್ಸಾಹಕವಾಗಿ ನಿವೇಶನ ನೀಡುವ ಕಾರ್ಯ 2014ರಿಂದ ಬಾಕಿ ಇದ್ದು, 1989ರ ಕಾನೂನಿನ ಪ್ರಕಾರ ಇದಕ್ಕಾಗಿ ಸೂಕ್ತ ಅರ್ಜಿ ಹಾಕಬೇಕು. ಇದಕ್ಕೆ ಬೆಲೆ ನಿಗದಿ ಮಾಡಲಾಗುವುದು. ಜಮೀನು ನೀಡಿದ ರೈತರ ಉಪಕಾರ ಸ್ಮರಣೆಯಾಗಿ ಅಲ್ಲಿ ನಾವು ವಾಲ್ ಆಪ್ ಗ್ರಾಟಿಟ್ಯೂಡ್ ಹಾಕಿದ್ದೇವೆ. ಇದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು ಎಂದು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು (Marginal Land) ಲಭ್ಯವಿದ್ದಲ್ಲಿ, ಅಂಚಿನ ಜಾಗದ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿಯಿದ್ದಲ್ಲಿ 2026 ಡಿಸೆಂಬರ್ 17ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 600 ಚದರ ಅಡಿವರೆಗೂ ಈ ರೀತಿಯ ಸೈಟ್ ನೀಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ, ಗುತ್ತಿಗೆ ಅವಧಿಯು ಮುಕ್ತಾಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಬಿಡಿಎ ಹಂಚಿಕೆ ಮಾಡುವ ನಿವೇಶನಗಳ ಹತ್ತು ವರ್ಷದ ಗುತ್ತಿಗೆ ಅವಧಿಯಿರುತ್ತದೆ. ಈ ಅವಧಿಯು ಪೂರ್ಣಗೊಂಡ ಬಳಿಕ ನಾಗರಿಕರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ಸದರಿ ನಿವೇಶನಕ್ಕೆ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
ಆದರೆ ನಾನಾ ಕಾರಣಗಳಿಂದ ಸುಮಾರು 20 ಸಾವಿರ ಹಂಚಿಕೆದಾರರು ಗುತ್ತಿಗೆ ಅವಧಿ ಪೂರ್ಣಗೊಂಡರೂ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಂಡಿರುವುದಿಲ್ಲ. ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸುತ್ತಿದ್ದು, ನಿವೇಶನದ ದಾಖಲಾತಿಗಳೊಂದಿಗೆ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯನ್ನು ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಕ್ರಮವಹಿಸಲಾಗುವುದು ಎಂದಿದ್ದಾರೆ.
ಇದೇ ವೇಳೆ ಬಿಡಿಎ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 1ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಬಹುಪಯೋಗಿ ಪ್ರಾಧಿಕಾರದ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.