ಪೊಲೀಸರಿಂದ ಎಸ್ಕೇಪ್​ ಆಗಲು ಹೋಗಿ ಹೋಟೆಲ್​ ಬಾಲ್ಕನಿಯಿಂದ ಬಿದ್ದ ಯುವತಿ 
ರಾಜ್ಯ

ಪೊಲೀಸರಿಂದ ಎಸ್ಕೇಪ್​ ಆಗಲು ಹೋಗಿ ಆಯತಪ್ಪಿ ಹೋಟೆಲ್​ ಬಾಲ್ಕನಿಯಿಂದ ಬಿದ್ದ ಯುವತಿ! Bengaluru Woman

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಹೋಟೆಲ್​ ಬಾಲ್ಕನಿಯಿಂದ ಕೆಳಗೆ ಬಿದ್ದ ಯುವತಿಯೊಬ್ಬಳು ( Bengaluru Woman ) ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಘಟನೆ ಬೆಂಗಳೂರಿನ ಬ್ರೂಕ್​ಫೀಲ್ಡ್​ನಲ್ಲಿರುವ ಸೀ ಎಸ್ಟಾ​ ಲಾಡ್ಜ್​ನಲ್ಲಿ ನಡೆದಿದೆ.
ಲೇಟ್​​​ ನೈಟ್​ ಪಾರ್ಟಿಗಳಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಭಾನುವಾರ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ತಡರಾತ್ರಿ ಪೊಲೀಸರು ದಿಢೀರ್​ ದಾಳಿ ನಡೆಸಿದಾಗ, ಅವರಿಂದ ತಪ್ಪಿಸಿಕೊಳ್ಳಲು ಹೋಟೆಲ್​ನ ಡ್ರೈನ್​ಪೈಪ್​ ಮೂಲಕ ಹಾದು ಹೋಗುವಾಗ ಆಯತಪ್ಪಿ ಕೆಳಗೆ ಬಿದ್ದು 21 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಯುವತಿಯ ತಂದೆ ಆ್ಯಂಟನಿ ಸಲ್ಲಿಸಿದ ದೂರಿನ ಪ್ರಕಾರ, ಅವರ ಮಗಳು ತನ್ನ ಏಳು ಸ್ನೇಹಿತರೊಂದಿಗೆ ಬ್ರೂಕ್‌ಫೀಲ್ಡ್‌ನಲ್ಲಿರುವ ಸೀ ಎಸ್ಟಾ ಲಾಡ್ಜ್‌ಗೆ ಪಾರ್ಟಿಗಾಗಿ ಹೋಗಿದ್ದಳು. ಈ ವೇಳೆ ಯುವತಿಯ ಸ್ನೇಹಿತರು ಮೂರು ಕೊಠಡಿಗಳನ್ನು ಹೋಟೆಲ್​ನಲ್ಲಿ ಬುಕ್ ಮಾಡಿದ್ದರು. ರಾತ್ರಿ 1 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪಾರ್ಟಿ ನಡೆಯುತ್ತಿತ್ತು.
ಪಾರ್ಟಿಯ ಸಮಯದಲ್ಲೇ ಅತಿಯಾದ ಮ್ಯೂಸಿಕ್​ ಹಾಗೂ ಗಲಾಟೆಯಿಂದಾಗಿ ಕಿರಿಕಿರಿ ಅನುಭವಿಸಿದ ಸ್ಥಳೀಯ ನಿವಾಸಿಗಳು 112 ಪೊಲೀಸ್​ ಸಹಾಯವಾಣಿಗೆ ಕರೆ ದೂರು ಸಲ್ಲಿಸಿದರು. ಫೋನ್​ ಕರೆಯ ಬೆನ್ನಲ್ಲೇ ಪೊಲೀಸರು ಲಾಡ್ಜ್‌ಗೆ ಆಗಮಿಸಿ, ಪಾರ್ಟಿ ಮಾಡುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದರು. ನಿಮ್ಮ ಕೂಗಾಟ ಮತ್ತು ಗದ್ದಲವು ಹತ್ತಿರದ ನಿವಾಸಿಗಳಿಗೆ ತುಂಬಾ ತೊಂದರೆ ಉಂಟುಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಇದೇ ಸಮಯದಲ್ಲಿ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ.
ಪೊಲೀಸರ ವಿಚಾರಣೆಯ ಸಮಯದಲ್ಲಿ ತೀವ್ರ ಭಯಭೀತಳಾದ ಯುವತಿ, ಬಾಲ್ಕನಿಯಿಂದ ಡ್ರೈನ್ ಪೈಪ್ ಬಳಸಿ ನಾಲ್ಕನೇ ಮಹಡಿಯ ಕೋಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಆಯತಪ್ಪಿ ಬಾಲ್ಕನಿಯಿಂದ ಕೆಳಗೆ ಬಿದ್ದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯ ಸ್ನೇಹಿತರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದೂರಿನ ಆಧಾರದ ಮೇಲೆ, ಸೀ ಎಸ್ಟಾ ಲಾಡ್ಜ್ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲ್ಕನಿ ಪ್ರದೇಶದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳು ಜಾರಿಯಲ್ಲಿಲ್ಲ ಎಂದು ಹೇಳಿ ಲಾಡ್ಜ್ ಆಡಳಿತ ಮಂಡಳಿಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇತ್ತ ನ್ಯಾಯಕ್ಕಾಗಿ ಸಂತ್ತಸ್ತ ಯುವತಿಯ ಸ್ನೇಹಿತರು ಹಾಗೂ ಪಾಲಕರು ಆಗ್ರಹಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ, (ಏಜೆನ್ಸೀಸ್​).