- ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋದು ಸೈಬರ್ ಖದೀಮರ ಹೊಸ ಅಸ್ತ್ರವಾಗಿದೆ
- ಇದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೇ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ
- ಅಚ್ಚರಿ ಸಂಗತಿ ಏನೆಂದರೆ, ಚೆನ್ನಾಗಿ ಓದಿಕೊಂಡವರೇ ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ
- ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಇದೀಗ 2 ಕೋಟಿ ರೂ. ಕಳೆದುಕೊಂಡಿದ್ದಾರೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋದು ಸೈಬರ್ ಖದೀಮರ ಹೊಸ ಅಸ್ತ್ರವಾಗಿದೆ. ಅನೇಕ ಮಂದಿಗೆ ಇದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೇ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಅಚ್ಚರಿ ಸಂಗತಿ ಏನೆಂದರೆ, ಚೆನ್ನಾಗಿ ಓದಿಕೊಂಡವರೇ ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ತಾಜಾ ಘಟನೆಯೊಂದರಲ್ಲಿ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ( Bengaluru Techie ) ಡಿಜಿಟಲ್ ಅರೆಸ್ಟ್ಗೆ ಸಿಲುಕಿ ಸುಮಾರು 2 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಸಾಫ್ಟ್ವೇರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ, ತನ್ನ 10 ವರ್ಷದ ಪುತ್ರನೊಂದಿಗೆ ನಗರದ ವಿಜ್ಞಾನ್ ನಗರದಲ್ಲಿ ವಾಸವಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಕೊರಿಯರ್ ಅಧಿಕಾರಿ ಸೋಗಿನಲ್ಲಿ ಖದೀಮನೊಬ್ಬ ಕರೆ ಮಾಡಿದ್ದ. ಆ ಕರೆಯನ್ನು ಸಂತ್ರಸ್ತೆ ಸ್ವೀಕರಿಸಿದಾಗ ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಅನುಮಾನಾಸ್ಪದ ಲಗೇಜನ್ನು ಸೀಜ್ ಮಾಡಲಾಗಿದೆ ಎಂದು ಹೇಳಿದ್ದಾನೆ.
ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಆ ಕರೆಯನ್ನು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡವರಿಗೆ ವರ್ಗಾಯಿಸಲಾಯಿತು. ಪೊಲೀಸ್ ವೇಷದಲ್ಲಿ ಮಾತನಾಡಿದ ದುರುಳರು ತಕ್ಷಣವೇ ಆಕೆಯನ್ನು ಬೆದರಿಸಿ, ದಾಖಲೆಗಳ ಪರಿಶೀಲನೆ ಮುಗಿಯುವವರೆಗೂ ಮನೆಯಿಂದ ಹೊರಗೆ ಬಾರದಂತೆ ತಾಕೀತು ಮಾಡಿದರು. ಅಲ್ಲದೆ, ಒಂದು ನಿರ್ದಿಷ್ಟ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ನಾವು ಹೇಳಿದ್ದನ್ನು ಕೇಳದೇ ಹೋದರೆ ಅಥವಾ ಸಹಕರಿಸದೇ ಹೋದರೆ ನಿಮ್ಮ ಮಗ ಪರಿಣಾಮ ಎದುರಿಸಲಿದ್ದಾನೆ ಎಂದು ಖದೀಮರು ಧಮ್ಕಿ ಹಾಕಿದರು.
ಮಗನನ್ನು ಮುಂದೆ ಇಟ್ಟು ಬೆದರಿಕೆ ಹಾಕಿದ್ದರಿಂದ ಹೆದರಿದ ಸಂತ್ರಸ್ತೆ ದುಷ್ಕರ್ಮಿಗಳು ಹೇಳಿದಂತೆಯೇ ಎಲ್ಲ ಸೂಚನೆಗಳನ್ನು ಪಾಲಿಸಿದಳು. ಆಕೆ ಮಾಲೂರಿನಲ್ಲಿರುವ ತನ್ನ ಎರಡು ನಿವೇಶನಗಳನ್ನು ಕಡಿಮೆ ಬೆಲೆಗೆ ಮಾರಿದಳು. ಅಲ್ಲದೆ, ವಿಜ್ಞಾನ್ ನಗರದಲ್ಲಿದ್ದ ತನ್ನ ಫ್ಲ್ಯಾಟ್ ಕೂಡ ಮಾರಿದಳು. ತನ್ನ ಎಲ್ಲ ಆಸ್ತಿಯನ್ನು ಮಾರಿದ ಸಂತ್ರಸ್ತೆ, ಅದರಿಂದ ಬಂದ ಹಣವನ್ನು ದುರುಳರು ನೀಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದಳು. ಇಷ್ಟೇ ಅಲ್ಲದೆ, ಹಣ ಸಾಲದೇ ಇದ್ದಾಗ ಬ್ಯಾಂಕ್ನಿಂದ ಲೋನ್ ಪಡೆದು ಸಹ ಹಣ ಪಾವತಿ ಮಾಡಿದಳು.
ಅಂದಹಾಗೆ ಸಂತ್ರಸ್ತೆಯನ್ನು ಬಬಿತಾ ದಾಸ್ ಎಂದು ಗುರುತಿಸಲಾಗಿದೆ. ಈಕೆ ಒಟ್ಟು 2 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ತಾನು ಡಿಜಿಟಲ್ ಅರೆಸ್ಟ್ ಆಗಿದ್ದೆ ಅನ್ನೋದು ಗೊತ್ತಾದ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾಳೆ. ಇದೀಗ ದುಷ್ಟರು ಕರೆ ಮಾಡಿದ್ದ ನಂಬರ್ ಸ್ವಿಚ್ ಆಫ್ ಆಗಿದೆ. ಅಲ್ಲದೆ, ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲೂ ಸಂತ್ರಸ್ತೆ ದೂರು ದಾಖಲಿಸಿದ್ದು, ಪೊಲೀಸರು ಡಿಜಿಟಲ್ ಅರೆಸ್ಟ್ ಹಗರಣದ ತನಿಖೆ ಆರಂಭಿಸಿದ್ದಾರೆ, (ಏಜೆನ್ಸೀಸ್).