Bengaluru woman stabbed to death
- ನಡು ರಸ್ತೆಯಲ್ಲೇ ಯುವತಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದ ಯುವಕ
- ಕ್ರಿಮಿನಲ್ ಹಿನ್ನೆಲೆ ಎಂದು ಮದುವೆ ಬೇಡ ಎಂದಿದ್ದ ಪೋಷಕರು
- ಊಟಕ್ಕೆ ಕರೆದು ಮದುವೆ ತಗಾದೆ ತೆಗೆದು ಕೊಲೆ ಮಾಡಿದ ರಾಜೀವ್ ಬಂಧನ
ಬೆಂಗಳೂರು: ಇತ್ತೀಚೆಗೆ ಪಾಗಲ್ ಪ್ರೇಮಿಯೊಬ್ಬ ಮೂರು ನಾಡ ಬಾಂಬ್ ಸ್ಫೋಟಿಸಿಕೊಂಡು ಮೃತಪಟ್ಟ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಬೇಡ ಎಂದಿದ್ದಕ್ಕೆ ನಡು ರಸ್ತೆಯಲ್ಲೇ ಪ್ರೇಯಸಿಯನ್ನು ಇರಿದು ಕೊಲೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ನ ನಾಗಪುರ ಲೇಔಟ್ನ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.
ಮೃತ ಯುವತಿ ಅಂಜಲಿ(23) ಎಂದು ಗುರುತಿಸಲಾಗಿದೆ. ಆರೋಪಿ ರಾಜೀವ್ ಎಂಬಾತನನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ ಎನ್ನಲಾಗಿದೆ.
ನಾಲ್ಕು ವರ್ಷದ ಪ್ರೀತಿ
ಮಹಾಲಕ್ಷ್ಮಿ ಲೇಔಟ್ನ ನಾಗಪುರ ಲೇಔಟ್ನ ಪೈಪ್ ಲೈನ್ ರಸ್ತೆಯಲ್ಲಿ ರಾತ್ರಿ 9:30ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಂಜಲಿ ಮತ್ತು ರಾಜೀವ್ ಕೆಲ ವರ್ಷದ ಹಿಂದೆ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆಗ ಪರಿಚಯ ಪ್ರೀತಿಗೆ ತಿರುಗಿತ್ತು. ಮೂರ್ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಮದುವೆಗೂ ಪೋಷಕರನ್ನು ಒಪ್ಪಿಸಬೇಕು ಎಂದಿದ್ದರು. ಆದರೆ, ಆತನ ಬ್ಯಾಗ್ರೌಂಡ್ ಚೆಕ್ ಮಾಡಿದ್ದ ಅಂಜಲಿ ಪೋಷಕರು ಮದುವೆಗೆ ನಿರಾಕರಿಸಿದ್ದರು.
ಕ್ರಿಮಿನಲ್ ಹಿನ್ನೆಲೆ, ಮದುವೆ ರಿಜೆಕ್ಟ್
ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದೆ ಬೇಡ ಎಂದಿದ್ದರು. ಇಷ್ಟಾದರೂ ಮದುವೆಗೆ ಒಪ್ಪಿಸಲು ರಾಜೀವ್ ಸಾಕಷ್ಟು ಒದ್ದಾಡಿದ್ದನಂತೆ, ಕೊನೆಗೆ ಆ ಕೆಲಸವಾಗದೆ ಬೇಸತ್ತಿದ್ದಾನೆ. ಅಂಜಲಿ ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು, ನಂಬರ್ ಬ್ಲಾಕ್ ಮಾಡಿ, ಮಾತನಾಡಿಸೋದನ್ನೆ ಕಡಿಮೆ ಮಾಡಿದ್ದಳು.
ನಡುರಸ್ತೆಯಲ್ಲೇ ಕೊಲೆ
ಜೂನ್ 28ರಂದು ಊಟಕ್ಕೆ ಸಿಗೋಣ ಎಂದು ರಾಜೀವ್ ಆಕೆಯನ್ನು ಕರೆದಿದ್ದನಂತೆ. ಚಾಕುವನ್ನು ಆಕೆಗೆ ಕಾಣಿಸದೆ ತಂದಿದ್ದ ಆತ, ಊಟ ಮಾಡುತ್ತಾ ಮದುವೆ ಬಗ್ಗೆ ಪ್ರಸ್ತಾಪಿಸಿದ್ದನಂತೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಕೋಪಗೊಂಡು, ಅಂಜಲಿ ಹೋಟೆಲ್ನಿಂದ ಹೊರಟು ಹೋದಳಂತೆ. ಈ ವೇಳೆ ಅವಳನ್ನು ಹಿಂಬಾಲಿಸಿ ಕುತ್ತಿಗೆಗ ಚಾಕು ಇರಿದು ಕೊಲೆ ಮಾಡಿದ್ದಾನೆ. ಸ್ಥಳೀಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದಿದ್ದ ಮಹಾಲಕ್ಷ್ಮಿ ಪೊಲೀಸ್ ಠಾಣಾ ಪೊಲೀಸರು ರಾಜೀವ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಯಾದ ಅಂಜಲಿ ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎನ್ನಲಾಗಿದೆ.
ಪೊಲೀಸರು ಹೇಳಿದ್ದಿಷ್ಟು!
ಮಹಾಲಕ್ಷ್ಮಿ ಲೇಔಟ್ ನಲ್ಲಿ ಯುವತಿ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ನೇಮೇಗೌಡ ಅವರು ಮಾತನಾಡಿ, ಅಂಜಲಿಗೆ ರಾಜೀವ್ ಅನ್ನೋರ ಜೊತೆ ಪ್ರೀತಿ ಸಂಬಂಧ ಇತ್ತು. ಅಂಜಲಿ ಅನ್ನೋವರನ್ನ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ ಅಂತ ಅವರ ಅಜ್ಜಿ ದೂರು ಕೊಟ್ಟಿದ್ದಾರೆ. ಏನ್ ವಿಚಾರಕ್ಕೆ ಕೊಲೆ ಮಾಡಿದ್ದಾನೆ ಎಂದು ವಿಚಾರಣೆ ಮಾಡಲಾಗುತ್ತಿದೆ. ರಾಜೀವ್ ಡಕಾಯಿತಿ ,ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಗೊತ್ತಾಗಿದೆ.ಮದುವೆ ಆಗು ಅಂತ ಯುವತಿಗೆ ಆತ ಬಲವಂತ ಮಾಡುತ್ತಿದ್ದ ಎಂದು ಕಂಡು ಬಂದಿದೆ ಎಂದು ಹೇಳಿದರು, (ಏಜೆನ್ಸೀಸ್).