ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​, ವಂದೇ ಭಾರತ್ ಎಕ್ಸ್​ಫ್ರೆಸ್​ ರೈಲು ಹಾಗೂ ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಎಚ್​.ಡಿ.ಕುಮಾರಸ್ವಾಮಿ 
ರಾಜ್ಯ

ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರಿನಿಂದ ಮಡಗಾಂವ್‌ವರೆಗೆ ವಿಸ್ತರಣೆಗೊಂಡ ವಂದೇ ಭಾರತ್ ರೈಲು, ಎಚ್‌ಡಿಕೆ ಧನ್ಯವಾದ! Bengaluru-Madgaon Vande Bharat Express

ಹೆಚ್ಚುತ್ತಿರುವ ಪ್ರಯಾಣಿಕರ ಸಂದಣಿ ಹಾಗೂ ಹಳೇ ಮೈಸೂರು ಹಾಗೂ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು, ಹಾಸನ, ಮಂಗಳೂರು, ಉಡುಪಿ ಮತ್ತು ಕಾರವಾರದ ಮೂಲಕ ಬೆಂಗಳೂರು ಹಾಗೂ ಮಡಗಾಂವ್ ನಡುವೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ( Bengaluru-Madgaon Vande Bharat Express ) ಸಂಪರ್ಕ ಕಲ್ಪಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಮನವಿಗೆ ಕೇಂದ್ರ ರೈಲ್ವೆ ಇಲಾಖೆ ಮನ್ನಣೆ ನೀಡಿದೆ.

ಬೆಂಗಳೂರು/ನವದೆಹಲಿ: ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ನಡುವಿನ ಪ್ರಯಾಣಿಕರ ಕನಸು ನನಸಾಗುವ ಕಾಲ ಕೂಡಿಬಂದಿದೆ. ರಾಜ್ಯದ ಪ್ರಮುಖ ಧಾರ್ಮಿಕ, ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡಲಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂದಣಿ ಹಾಗೂ ಹಳೇ ಮೈಸೂರು ಹಾಗೂ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು, ಹಾಸನ, ಮಂಗಳೂರು, ಉಡುಪಿ ಮತ್ತು ಕಾರವಾರದ ಮೂಲಕ ಬೆಂಗಳೂರು ಹಾಗೂ ಮಡಗಾಂವ್ ನಡುವೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ( Bengaluru-Madgaon Vande Bharat Express ) ಸಂಪರ್ಕ ಕಲ್ಪಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಮನವಿಗೆ ಕೇಂದ್ರ ರೈಲ್ವೆ ಇಲಾಖೆ ಮನ್ನಣೆ ನೀಡಿದೆ. ಕುಮಾರಸ್ವಾಮಿ ಅವರ ಈ ವಿಶೇಷ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅತ್ಯಂತ ತ್ವರಿತ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕರಾವಳಿ ಹಾಗೂ ಮಲೆನಾಡಿನ ಜನತೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ಪ್ರಸ್ತುತ ಚಾಲನೆಯಲ್ಲಿರುವ ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಇದೀಗ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹಾಸನ, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಬೆಂಗಳೂರುವರೆಗೆ ವಿಸ್ತರಿಸಲಾಗಿದೆ. ಈ ಹೊಸ ಬೆಳವಣಿಗೆಯಿಂದಾಗಿ ಕರಾವಳಿ ಭಾಗದ ಜನರಿಗೆ ಮತ್ತು ಗೋವಾಕ್ಕೆ ತೆರಳುವ ಪ್ರವಾಸಿಗರಿಗೆ ಅತ್ಯಾಧುನಿಕ ಹಾಗೂ ವೇಗದ ರೈಲು ಸಂಚಾರದ ಸೌಲಭ್ಯ ಲಭ್ಯವಾದಂತಾಗಿದೆ. ಈ ಕುರಿತು ತಮ್ಮ ಸಂತಸ ಹಂಚಿಕೊಂಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ವಿಸ್ತರಿಸಲಾಗಿರುವ ಈ ಅತ್ಯಾಧುನಿಕ ವಂದೇ ಭಾರತ್ ರೈಲು ಇನ್ನುಮುಂದೆ ಪರಿಷ್ಕೃತ ಸಮಯದೊಂದಿಗೆ ಅಧಿಕೃತವಾಗಿ ಸಂಚರಿಸಲಿದೆ. ಈ ರೈಲು 'ರೈಲು ಸಂಖ್ಯೆ 26655/26656 ಯಶವಂತಪುರ-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್' ಹೆಸರಿನಲ್ಲಿ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಬೆಂಗಳೂರಿನ ಯಶವಂತಪುರದಿಂದ ಹೊರಡುವ ಈ ರೈಲು ಹಾಸನ, ಮಂಗಳೂರು, ಉಡುಪಿ ಮತ್ತು ಕಾರವಾರದ ಮೂಲಕ ಸಾಗಿ ಮಡಗಾಂವ್ ತಲುಪಲಿದೆ. ಇದು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ಬೆಸೆಯುವ ಅತ್ಯಂತ ಜನಪ್ರಿಯ ರೈಲು ಮಾರ್ಗವಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳಿವೆ.

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೇತೃತ್ವದಲ್ಲಿ ದೇಶಾದ್ಯಂತ ಅತ್ಯಾಧುನಿಕ ರೈಲು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾವನ್ನು ಪರಸ್ಪರ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಈ ರೈಲು ವಿಸ್ತರಣೆಯು ಮತ್ತೊಂದು ಮೈಲಿಗಲ್ಲಾಗಿದೆ. ಈ ಸುಧಾರಿತ ಸಂಪರ್ಕ ವ್ಯವಸ್ಥೆಯು ಕೇವಲ ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಕಲ್ಪಿಸುವುದಷ್ಟೇ ಅಲ್ಲದೆ, ಈ ಪ್ರದೇಶಗಳ ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆಗಳು, ಶಿಕ್ಷಣ, ವಾಣಿಜ್ಯ ಕ್ಷೇತ್ರಗಳು ಹಾಗೂ ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಭರ್ಜರಿ ಉತ್ತೇಜನ ನೀಡಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.