42 ವರ್ಷದ ವಿವಾಹಿತ ಮಹಿಳೆಯ ಮೋಹದ ಬಲೆಗೆ ಬಿದ್ದು ಸಾವಿಗೆ ಶರಣಾದ 28 ವರ್ಷದ ಜಿಮ್ ಟ್ರೈನರ್! Gym Trainer
- ವಿವಾಹಿತ ಮಹಿಳೆಯ ಕಿರುಕುಳ ತಾಳಲಾರದೆ ರಾಜ್ಯ ಮಟ್ಟದ ಫಿಟ್ನೆಸ್ ತರಬೇತುದಾರ ಸಾವಿಗೆ ಶರಣು
- ಮೃತ ದಿಲೀಪ್ ಅವರ ಸಹೋದರಿಗೆ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದ ಬಳಿಕ ಘಟನೆ ಬೆಳಕಿಗೆ
- ಜಿಮ್‌ನಲ್ಲಿ ಪರಿಚಯವಾಗಿದ್ದ 42 ವರ್ಷದ ವಿವಾಹಿತ ಮಹಿಳೆಯ ವಿರುದ್ಧ ಕೇಳಿಬಂತು ಗಂಭೀರ ಆರೋಪ
- ಮಹಿಳೆಯ ಕಿರುಕುಳ ಮುಂದುವರಿದಿದ್ದರಿಂದ ಮನನೊಂದು ದುಡುಕಿನ ನಿರ್ಧಾರ ಕೈಗೊಂಡ ದಿಲೀಪ್
ಬೆಂಗಳೂರು: ವಿವಾಹಿತ ಮಹಿಳೆಯೊಬ್ಬಳ ಕಿರುಕುಳವನ್ನು ತಾಳಲಾರದೆ ಜಿಮ್ ತರಬೇತುದಾರನೊಬ್ಬ ( Gym Trainer ) ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಬೆಂಗಳೂರು ನಗರದ ಹೊರವಲಯದಲ್ಲಿರುವ ನೆಲಮಂಗಲದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದಿಲೀಪ್ (28) ಎಂದು ಗುರುತಿಸಲಾಗಿದೆ. ಈತ ರಾಜ್ಯ ಮಟ್ಟದ ಫಿಟ್ನೆಸ್ ತರಬೇತುದಾರನಾಗಿದ್ದ. ನಿನ್ನೆ ತಡರಾತ್ರಿ ನೆಲಮಂಗಲದಲ್ಲಿರುವ ತನ್ನ ಮನೆಗೆ ಮರಳಿ, ಸಾವಿಗೆ ಶರಣಾಗಿದ್ದಾನೆ. ಯೋಗಿತಾ ಹೆಸರಿನ ಮಹಿಳೆಯೊಬ್ಬಳು ದಿಲೀಪ್ ಅವರ ಸಹೋದರಿಗೆ ಇನ್‌ಸ್ಟಾಗ್ರಾಂ ಮೆಸೇಜ್ ಕಳುಹಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಮೆಸೇಜ್ ಬಂದ ಕೂಡಲೇ ಕುಟುಂಬದ ಸದಸ್ಯರು ರೂಮಿನ ಬಾಗಿಲು ಮುರಿದು ನೋಡಿದಾಗ ಒಳಗಡೆ ದಿಲೀಪ್ ಮೃತದೇಹ ಪತ್ತೆಯಾಗಿದೆ. ಕುಟುಂಬದ ಮೂಲಗಳ ಪ್ರಕಾರ, ದಿಲೀಪ್ಗೆ ತನ್ನ ಜಿಮ್‌ನಲ್ಲಿ 42 ವರ್ಷದ ವಿವಾಹಿತ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ದಿನಗಳು ಕಳೆದಂತೆ ಸಲುಗೆಗೆ ತಿರುಗಿತ್ತು. ಇದಾದ ಬಳಿಕ ಆ ಮಹಿಳೆ ಹಣ ಮತ್ತು ಆಸ್ತಿಗಾಗಿ ದಿಲೀಪ್ನನ್ನು ಬ್ಲಾಕ್ಮೇಲ್ ಮಾಡಲು ಶುರು ಮಾಡಿದಳು ಎಂದು ಆರೋಪಿಸಲಾಗಿದೆ.
ಈ ಹಿಂದ ಇದೇ ವಿಚಾರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆ ವೇಳೆ ಮಹಿಳೆಯ ಪತಿಯ ಸಮ್ಮುಖದಲ್ಲಿ ಪರಸ್ಪರ ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಲಾಗಿತ್ತು. ಆದಾಗ್ಯೂ, ಆಕೆಯಿಂದ ಕಿರುಕುಳ ಮುಂದುವರೆಯಿತು ಎಂದು ದಿಲೀಪ್ ಕುಟುಂಬ ಆರೋಪ ಮಾಡಿದೆ. ಆಕೆಯ ಕಿರುಕುಳವನ್ನು ತಾಳಲಾರದೇ ದಿಲೀಪ್ ಇಂಥದ್ದೊಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ನಿರಂತರ ಕಿರುಕುಳವೇ ದಿಲೀಪ್ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬ ಸದಸ್ಯರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಪೊಲೀಸರು ತನಿಖೆ ಆರಂಭಿಸಿದ್ದಾರೆ, (ಏಜೆನ್ಸೀಸ್).