ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ 
ರಾಜ್ಯ

ಜನರನ್ನು ದಂಗೆ ಏಳಿಸಿ, ನಗರಸಭೆಗೆ ಬೆಂಕಿ ಹಾಕಿಸ್ತೀನಿ: ಕೈ​ ಮುಖಂಡನಿಂದ ಅಶ್ಲೀಲ ಪದ ಬಳಕೆ, ಶಿಡ್ಲಘಟ್ಟ ಪೌರಾಯುಕ್ತೆ ಕಣ್ಣೀರು! Banner Row

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಗೆ ಅಶ್ಲೀಲ ಪದ ಬಳಕೆ
  • ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಆರೋಪ
  • ರಾಜೀವ್​ ಗೌಡ ಆಡಿದ ಕೊಳಕು ಮಾತುಗಳಿಂದ ಬೇಸತ್ತು ಕಣ್ಣೀರಿಟ್ಟ ಅಮೃತಾ ಗೌಡ
ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ( Banner Row ) ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪ, ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಕೇಳಿಬಂದಿದೆ.
ರಾಜೀವ್ ಗೌಡ ಅವರು ಪೋನ್ ಕರೆ ಮಾಡಿ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾರೆ. ರಾಜೀವ್​ ಗೌಡ ಆಡಿದ ಕೊಳಕು ಮಾತುಗಳಿಂದ ಬೇಸತ್ತಿರುವ ಅಮೃತಾ ಅವರು ಕಣ್ಣೀರಿಟ್ಟಿದ್ದಾರೆ.

ಫೋನ್​ ಸಂಭಾಷಣೆಯಲ್ಲಿ ಏನಿದೆ?

ಕರೆ ಮಾಡಿದ ರಾಜೀವ್​ ಗೌಡ, ಮೇಡಂ ನೀವು ಬ್ಯಾನರ್​ ಬಿಚ್ಚೋಕೆ ಹೇಳಿದ್ರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ ಅಮೃತಾ, ಇಲ್ಲ ಸರ್​ ಒಂದು ಬ್ಯಾನರ್​ ಮಾತ್ರ ರಸ್ತೆಯ ಮಧ್ಯದಲ್ಲಿ ಹಾಕಿದ್ದರಂತೆ, ಅದು ವಾಹನಗಳಿಗೆ ಅಡ್ಡಿಯಾಗುತ್ತಿತ್ತಂತೆ. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಇತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರು ಅಂತ ನಾನು ಪಕ್ಕದಲ್ಲಿ ಬ್ಯಾನರ್​ ಕಟ್ಟಿಕೊಳ್ಳಲು ಸೂಚನೆ ನೀಡಿದ್ದೆ ಎಂದು ಅಮೃತಾ ಹೇಳುತ್ತಾರೆ. ಇದಕ್ಕೆ ಏರು ಧ್ವನಿಯಲ್ಲಿ ಮಾತನಾಡುವ ರಾಜೀವ್​, ಬ್ಯಾನರ್ ಬಿಚ್ಚಿದ್ದೀರಿ ಅಂತಾ ಏನಾದರೂ ಗೊತ್ತಾದ್ರೆ, ಬಂದು ಬೆಂಕಿ ಹಚ್ಚಿಸುತ್ತೇನೆ. ನೀವು ನನ್ನ ಒಳ್ಳೆಯತನ ನೋಡಿದ್ದೀರಿ ಆದರೆ, ಕೆಟ್ಟತನ ನೋಡಿಲ್ಲ ಎಂದು ಕಿಡಿಕಾರಿದರು.
ದೂರು ಬಂದರೆ ಅದು ಹೇಗೆ ಬ್ಯಾನರ್​ ಕಿತ್ತುಹಾಕುತ್ತೀರಿ ಎನ್ನುತ್ತಲೇ ರಾಜೀವ್​ ಅವರು ತೀರಾ ಅಶ್ಲೀಲ ಪದಗಳನ್ನು ಬಳಸಿದರು. ಬ್ಯಾನರ್​ ಕಟ್ಟಿರುವುದೇ ಅಕ್ರಮ ಮತ್ತು ಅದನ್ನು ಸೈಂಟಿಫಿಕ್​ ಆಗಿ ಕಟ್ಟಿಲ್ಲ. ಇದರಿಂದ ಅಪಘಾತವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ ಎಂದು ಅಮೃತಾ ಅವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದಾಗ, ರಾಜೀವ್​ ಅವರು ಮಾತು ನಿಲ್ಲಿಸದೇ, ಅಶ್ಲೀಲ ಬೈಗುಳಗಳನ್ನು ಮುಂದುವರಿಸುತ್ತಾರೆ. ಕಳೆದ ಬಾರಿಯೂ ಇದೇ ರೀತಿ ಬ್ಯಾನರ್​ಗಳನ್ನು ತೆಗೆಸಿಹಾಕಿ, ಶಾಸಕರ ಬ್ಯಾನರ್​ ಹಾಕಿಸಿದ್ದೀರಿ ಎನ್ನುತ್ತಾ ಸ್ಥಳೀಯ ಶಾಸಕ ಬಿ.ಎನ್​. ರವಿಕುಮಾರ್​ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದರು. ಅಲ್ಲದೆ, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ. ಸಿ.ಸುಧಾಕರ್​ಗೂ ನಿಂದನೆ ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ, ಜನರನ್ನು ದಂಗೆ ಏಳಿಸ್ತೀನಿ, ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಮತ್ತು ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡನ ಬೆದರಿಕೆಗೆ, ಶಿಡ್ಲಘಟ್ಟ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಅಂದಹಾಗೆ, ಸಚಿವ ಜಮೀರ್​ ಅಹ್ಮದ್​ ಅವರ ಪುತ್ರ ಜೈದ್​ ಖಾನ್​ ಅವರ ಕಲ್ಟ್​ ಸಿನಿಮಾದ ಬ್ಯಾನರ್​ ತೆರೆವುಗೊಳಿಸಿದ್ದಕ್ಕೆ ಈ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ರಾಜೀವ್​ ಗೌಡ ಸ್ಪಷ್ಟನೆ
ಫೋನ್​ ಕಾಲ್​ ರೆಕಾರ್ಡಿಂಗ್​ ಆಡಿಯೋ ವೈರಲ್​ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ರಾಜೀವ್​ ಗೌಡ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡಿರುವ ರಾಜೀವ್​ ಗೌಡ, ನಾನು ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅಮೃತಾ ಅವರೊಂದಿಗೆ ನಾನು ಆ ರೀತಿ ಮಾತನಾಡಬಾರದಿತ್ತು. ಈ ವಿಚಾರವಾಗಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.