Robbery 
ರಾಜ್ಯ

ಮಾಲೀಕ ಊರಿಗೆ ಹೋಗಿದ್ದೇ ಚಾನ್ಸ್ ಅಂತ 25 ಲಕ್ಷ ಎಗರಿಸಿದ ಗಂಡ-ಹೆಂಡತಿ: ಸಿಕ್ಕಿಬಿದ್ದಿದ್ದು ಹೇಗೆ? | Robbery

ಬೆಂಗಳೂರು: ಕಡಿಮೆ ಸಂಬಳಕ್ಕೆ ಮನೆಗೆಲಸಕ್ಕೆ ಸೇರಿಕೊಳ್ಳುವುದು, ನಂತರ ಮಾಲೀಕರು ಮನೆಯಲ್ಲಿಲ್ಲದ ಸಮಯ ನೋಡಿ ಕೀಲಿ ಕೈ ಪತ್ತೆಹಚ್ಚಿ ಲಕ್ಷಾಂತರ ರೂಪಾಯಿ ಕದ್ದು ಪರಾರಿಯಾಗುವುದು! ಇಂತಹದ್ದೇ ಒಂದು ಗಂಭೀರ ಸ್ಕೆಚ್(Robbery) ಹಾಕಿ ಉದ್ಯಮಿಯೊಬ್ಬರ ಮನೆಯಲ್ಲಿ 25 ಲಕ್ಷ ರೂಪಾಯಿ ಕದ್ದಿದ್ದ ನೇಪಾಳಿ ದಂಪತಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಎಂದು ಗುರುತಿಸಲಾಗಿದೆ. ಇವರು ಕದ್ದಿದ್ದ ಸಂಪೂರ್ಣ 25 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನದ ಪ್ಲಾನ್ ಹೇಗಿತ್ತು ಗೊತ್ತಾ?

ಬೆಂಗಳೂರಿನ ಉದ್ಯಮಿಯೊಬ್ಬರು ಕೇವಲ ಒಂದು ತಿಂಗಳ ಹಿಂದೆಯಷ್ಟೇ ಈ ನೇಪಾಳಿ ದಂಪತಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಆದರೆ, ಈ ದಂಪತಿ ಕೆಲಸ ಮಾಡುವ ನೆಪದಲ್ಲಿ ಇಡೀ ಮನೆಯ ಮೇಲೆ ಕಣ್ಣಿಟ್ಟಿದ್ದರು. ಮನೆಯಲ್ಲಿ ಹಣ, ಒಡವೆಗಳನ್ನು ಎಲ್ಲಿ ಇಡುತ್ತಾರೆ? ಕಪಾಟಿನ ಕೀಲಿಗಳನ್ನು ಎಲ್ಲಿ ಅಡಗಿಸಿಡುತ್ತಾರೆ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಮಾಲೀಕ ಊರಿಗೆ ಹೋಗಿದ್ದೇ ಚಾನ್ಸ್!

ಕೆಲವು ದಿನಗಳ ಹಿಂದೆ, ಉದ್ಯಮಿಯು ತಮ್ಮ ಕಂಪನಿಯ ನೌಕರರಿಗೆ ಸಂಬಳ ನೀಡಲು ಬ್ಯಾಂಕಿನಿಂದ 25 ಲಕ್ಷ ರೂಪಾಯಿ ಹಣವನ್ನು ತಂದು ಮನೆಯ ಕಪಾಟಿನಲ್ಲಿ ಇಟ್ಟಿದ್ದರು. ಇದನ್ನು ದಂಪತಿಗಳು ನೋಡಿ ಇಟ್ಟುಕೊಂಡಿದ್ದರು. ಇತ್ತೀಚೆಗೆ ಮಾಲೀಕರು ದಂಪತಿಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ವೈಯಕ್ತಿಕ ಕೆಲಸದ ಮೇಲೆ ಬೆಂಗಳೂರಿನಿಂದ ಹೊರಗೆ ಹೋಗಿದ್ದರು.
ಪ್ಲಾನ್ ಪ್ರಕಾರ ಇದೇ ಸರಿಯಾದ ಸಮಯ ಎಂದುಕೊಂಡ ಗಂಡ-ಹೆಂಡತಿ, ಮನೆಯಲ್ಲಿದ್ದ ಮತ್ತೊಂದು ಕಪಾಟಿನಿಂದ ಕೀಲಿ ಕೈ ಹುಡುಕಿ ತೆಗೆದಿದ್ದಾರೆ. ನಂತರ ಹಣವಿದ್ದ ಲಾಕರ್ ಓಪನ್ ಮಾಡಿ 25 ಲಕ್ಷ ರೂಪಾಯಿ ಇದ್ದ ಬ್ಯಾಗ್ ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪೊಲೀಸರ ಸಮಯಪ್ರಜ್ಞೆ, ಸಿನಿಮೀಯ ಅರೆಸ್ಟ್!

ಉದ್ಯಮಿಯ ಕುಟುಂಬದವರು ಮನೆಗೆ ವಾಪಸ್ ಬಂದಾಗ ಮನೆಗೆಲಸದವರು ಕಾಣೆಯಾಗಿರುವುದು ಕಂಡುಬಂದಿದೆ. ಅನುಮಾನಗೊಂಡು ಕಪಾಟು ಪರಿಶೀಲಿಸಿದಾಗ 25 ಲಕ್ಷ ರೂಪಾಯಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ಓಡಿಹೋಗಿ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಆರೋಪಿಗಳು ಬೆಂಗಳೂರು ಬಿಟ್ಟು ರೈಲು ಅಥವಾ ಬಸ್ ಮೂಲಕ ಪರಾರಿಯಾಗುವ ಮೊದಲೇ ಜಾಲ ಬೀಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕದ್ದ ಹಣವನ್ನೂ ಜಪ್ತಿ ಮಾಡಿದ್ದಾರೆ.

ಕಡಿಮೆ ಸಂಬಳಕ್ಕೆ ಬರುವುದೇ ಇದಕ್ಕಾ?

ನೇಪಾಳದಿಂದ ಬರುವ ಇಂತಹ ಗ್ಯಾಂಗ್‌ಗಳು ಕಳ್ಳತನ ಮಾಡುವ ಉದ್ದೇಶದಿಂದಲೇ ನಗರದ ಶ್ರೀಮಂತರ ಮನೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ದಂಪತಿಯನ್ನು ಜೈಲಿಗಟ್ಟಲಾಗಿದ್ದು, ಇವರ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್​).