Bagalkot 
ರಾಜ್ಯ

Bagalkot: ನೀರಿನ ಟ್ಯಾಂಕ್‌ಗೆ ಬಿದ್ದು ಕಂದಮ್ಮ ಸಾವು; ಮಗು ಬದುಕಿ ಬರುತ್ತೆ ಎಂದು ಉಪ್ಪಿನಲ್ಲಿಟ್ಟ ಹೆತ್ತವರು!

ಬಾಗಲಕೋಟೆ: ಬಾಗಲಕೋಟೆಯ(Bagalkot) ನವನಗರದ ಸೆಕ್ಟರ್ ನಂಬರ್ 38ರಲ್ಲಿ ಎದೆ ಝಲ್​​ ಎನಿಸುವ ಕರುಣಾಜನಕ ಘಟನೆಯೊಂದು ಸೋಮವಾರ ನಡೆದಿದೆ.
ಹೌದು, ಎದುರಿನ ಮನೆಯ ನೀರಿನ ನೆಲದ ಟ್ಯಾಂಕ್ (ನೆಲದ ತೊಟ್ಟಿ)ನಲ್ಲಿ ಮುಳುಗಿ ಅಮೀನಾ ಪಟಾಣ್ ಎಂಬ 18 ತಿಂಗಳ ಹೆಣ್ಣು ಮಗು ದುರಂತವಾಗಿ ಸಾವನ್ನಪ್ಪಿದೆ. ಆದರೆ, ಮಗು ಮೃತಪಟ್ಟಿದ್ದರೂ ಅದನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳಬೇಕು ಎಂದು ಪೋಷಕರು ಮಾಡಿದ ವಿಲಕ್ಷಣ ಪ್ರಯತ್ನ ಇಡೀ ಜಿಲ್ಲಾಸ್ಪತ್ರೆಯನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಉಪ್ಪಿನಲ್ಲಿ ಮಗುವಿನ ಶವ ಇಟ್ಟ ಪೋಷಕರು!

ಮಗು ನೀರಿನಲ್ಲಿ ಮುಳುಗಿ ಮೃತಪಟ್ಟ ತಕ್ಷಣ, ಮೃತದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮಗು ಮತ್ತೆ ಬದುಕಿ ಬರುತ್ತದೆ ಎಂಬ ಮೂಢನಂಬಿಕೆ ಪೋಷಕರಲ್ಲಿ ಮನೆ ಮಾಡಿತ್ತು. ಈ ನಂಬಿಕೆಯಿಂದಾಗಿ ಪೋಷಕರು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗದಲ್ಲೇ ಮಗುವಿನ ಮುಖವನ್ನು ಮಾತ್ರ ಹೊರಗೆ ಬಿಟ್ಟು, ಇಡೀ ದೇಹವನ್ನು ಉಪ್ಪಿನ ರಾಶಿಯಲ್ಲಿ ಮುಳುಗಿಸಿ ಇಟ್ಟಿದ್ದರು.

ಮೊಬೈಲ್‌ನಲ್ಲಿ ಕುರಾನ್ ಪಠಣ!

ಮಗುವಿಗೆ ಉಪ್ಪನ್ನು ಹಾಕಿ ಕೂರಿಸಿದ್ದಲ್ಲದೆ, ಆಕೆಯ ಕಿವಿಯ ಬಳಿ ಮೊಬೈಲ್ ಇಟ್ಟು ಅದರಲ್ಲಿ ಕುರಾನ್‌ನ ಪವಿತ್ರ ವಚನಗಳನ್ನು ಪ್ಲೇ ಮಾಡಿದ್ದರು. ಕುರಾನ್ ಧ್ವನಿ ಕೇಳಿ ಮತ್ತು ಉಪ್ಪಿನ ಪ್ರಭಾವದಿಂದ ಮಗು ಮರಳಿ ಉಸಿರಾಡಬಹುದು ಎಂದು ಪೋಷಕರು ಭಾವುಕರಾಗಿ ಪ್ರಾರ್ಥಿಸುತ್ತಾ ಕುಳಿತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿತು.
ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಕಳೆದುಕೊಂಡು ಕಂಗಾಲಾಗಿರುವ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.