ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ನಿವೃತ್ತ ನ್ಯಾಯಾಧೀಶ ಅಥವಾ ಸಿಬಿಐ ನೇತೃತ್ವದಲ್ಲಿ ತನಿಖೆಯಾಗಬೇಕು. ಜತೆಗೆ, ಸಂಘದಲ್ಲಿ ನಡೆದಿರುವ ವಿವಿಧ ನೇಮಕಾತಿಗಳ ರದ್ದತಿಗಾಗಿ ಕೋರ್ಟ್ ಮೊರೆ ಹೋಗುವುದಾಗಿ ಸಂಘದ ನಿರ್ದೇಶಕ ಟಿ. ಕೋನಪ್ಪರೆಡ್ಡಿ ಹೇಳಿದ್ದಾರೆ.
ನನ್ನ ಮೇಲೆ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಸಂಘದಲ್ಲಿ ಕಡುಭ್ರಷ್ಟರರಿದ್ದಾರೆ. ಅಂತಹವರಿಗೆ ಜೈಲುಶಿಕ್ಷೆಯಾಗಬೇಕು. ಹಲವು ಮಹನೀಯರು ಕಟ್ಟಿ ಬೆಳೆಸಿದ ಸಂಘದ ಗೌರವವನ್ನು ಕೆಲವರು ಹಾಳು ಮಾಡುತ್ತಿದ್ದಾರೆ. 4 ವರ್ಷದಿಂದ ಸಂಘ ಚೆನ್ನಾಗಿ ನಡೆಯುತ್ತಿತ್ತು. ಆದರೆ 6 ತಿಂಗಳಿಂದ ಭ್ರಷ್ಟಾಚಾರ ಮೀತಿ ಮೀರಿದೆ. ಆಡಳಿತ ಮಂಡಳಿ ಸದಸ್ಯರ ಕೈಯಲ್ಲಿ ಎಲ್ಲ ಅಧಿಕಾರ ಇದೆ. ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಸಂಘದ ವೃಂದ ಮತ್ತು ನೇಮಕಾತಿ ಪ್ರಕಾರ ಕಂಪ್ಯೂಟರ್ ಆಪರೇಟರ್‌ಗಳ ನೇಮಕಾತಿ ನಡೆದಿಲ್ಲ. ಸಂದರ್ಶನ ನಡೆಸದೆ ನೇಮಕಾತಿ ಮಾಡಲಾಗಿದೆ. ಓದು-ಬರಹ ಗೊತ್ತಿಲ್ಲದವರಿಂದ ಲಕ್ಷಾಂತರ ರೂ. ಪಡೆದು ಹುದ್ದೆ ಕೊಟ್ಟಿದ್ದಾರೆ. ಪಿಎಚ್.ಡಿ. ಮಾಡದವರಿಗೆ ಕೆಲಸ ಕೊಟ್ಟಿದ್ದಾರೆ. ನರ್ಸಿಂಗ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ನಿಯಮಬಾಹಿರವಾಗಿ ಬಡ್ತಿ ಕೊಡಲಾಗಿದೆ. ಸಂಘದ ಖಜಾಂಚಿ ಕೆ.ವಿ. ಶ್ರೀಧರ್, ನಿರ್ದೇಶಕ ರಾಘವೇಂದ್ರ ಭಾರಿ ಅವ್ಯವಹಾರದಲ್ಲಿ ತೊಡಗಿದ್ದು, ಸಂಘದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ರಾಘವೇಂದ್ರ ಎಂಬಾತ ಶಕುನಿ ಪಾತ್ರ ನಿಭಾಯಿಸುತ್ತಿದ್ದಾನೆ. ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅಸಮರ್ಥರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದಲ್ಲಿ ಭ್ರಷ್ಟಾಚಾರ ನಡೆಸಿ ಹಣ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಏಕೈಕ ಕಾರಣದಿಂದ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದು ಎಂಬುದು ಅವರ ಉದ್ದೇಶ. ಸಂಘದಲ್ಲಿ ನಾನಿದ್ದರೆ ಅವರ ಅಕ್ರಮವನ್ನು ಬಯಲಿಗೆಳೆಯುತ್ತೇನೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧ್ಯಕ್ಷರ ಕುರ್ಚಿಯಲ್ಲಿ ಬೇರೆಯವರು ಕುಳಿತು ಕಾರ್ಯಭಾರ ಮಾಡುತ್ತಿದ್ದಾರೆ. ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮುದಾಯದವರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ವಿವರಿಸಿದರು.